ಕೋಲ್ಕತಾದಲ್ಲಿ ನಿಗೂಢ ಡ್ರೋನ್’ಗಳ ಹಾರಾಟ? ಬೇಹುಗಾರಿಕೆ ಸಾಧ್ಯತೆಯ ಶಂಕೆ; ತನಿಖೆಗೆ ಆದೇಶ
PC : freepik.com
ಕೋಲ್ಕತಾ: ಪಶ್ಚಿಮಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಸೋಮವಾರ ತಡರಾತ್ರಿ ಆಕಾಶದಲ್ಲಿ ಹಲವಾರು ಡ್ರೋನ್ ಮಾದರಿಯ ವಸ್ತುಗಳು ಹಾರಾಡುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕೋಲ್ಕತಾದ ಹಾಸ್ಟಿಂಗ್ಸ್ ಪ್ರದೇಶ, ಮೈದಾನ್ ಹಾಗೂ ವಿದ್ಯಾಸಾಗರ ಸೇತು ಎಂಬಲ್ಲಿ ಇಂತಹ 8-10 ವಸ್ತುಗಳು ಹಾರಾಡುತ್ತಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕೇಂದ್ರವು ಪಶ್ಚಿಮಬಂಗಾಳ ಸರಕಾರದಿಂದ ವರದಿಯನ್ನು ಕೇಳಿರುವುದಾಗಿ ರಾಜ್ಯ ಆಡಳಿತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಲ್ಕತಾದಲ್ಲಿ ಡ್ರೋನ್‌ಗಳ ಹಾರಾಟದ ಬಗ್ಗೆ ವರದಿಗಳು ಬಂದಿದ್ದು, ಅವುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಪ್ರಯತ್ನಗಳು ನಡೆಯುತ್ತಿರುವುದಾಗಿ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಡ್ರೋನ್‌ಗಳನ್ನು ಹೋಲುವ ವಸ್ತುಗಳು ಹಾರಾಡುತ್ತಿರುವುದನ್ನು ಮೊದಲಿಗೆ ಹಾಸ್ಟಿಂಗ್ಸ್ ಪೊಲೀಸ್ ಠಾಣೆಯ ಸಿಬ್ಬಂದಿ ಪತ್ತೆ ಹಚ್ಚಿದ್ದರು. ಈ ಡ್ರೋನ್ ಮಾದರಿಯ ವಸ್ತುಗಳು ಸೋಮವಾರ ತಡರಾತ್ರಿ ದಕ್ಷಿಣ24 ಪರಗಣದಲ್ಲಿರುವ ಮಹೇಶತಾಲಾ ದಿಕ್ಕಿನಲ್ಲಿ ಹಾರಾಡುತ್ತಿದ್ದವು. ಅವು ಹಾಸ್ಟಿಂಗ್ಸ್ ಪ್ರದೇಶದ ಮೇಲೆ ಸುಳಿದಾಡುತ್ತಿದ್ದವು. ಎರಡನೇ ಡ್ರೋನ್ ಹೂಗ್ಲಿ ಸೇತುವೆ (ವಿದ್ಯಾಸಾಗರ ಸೇತು) ಹಾಗೂ ಫೋರ್ಟ್ ವಿಲಿಯಂ (ಸೇನೆಯ ಪೂರ್ವ ಕಮಾಂಡ್‌ನ ಹೆಡ್‌ಕ್ವಾರ್ಟರ್ಸ್) ಮೇಲೆ ಹಾರಾಡುತ್ತಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಲ್ಕತಾ ಮಹಾನಗರದ ಪೂರ್ವ ಭಾಗದಲ್ಲಿರುವ ಪಾರ್ಕ್ ಸರ್ಕಸ್ ಪ್ರದೇಶದಲ್ಲೂ ಇಂತಹದೇ ವಸ್ತುಗಳು ಹಾರಾಡುತ್ತಿರುವುದು ಕಂಡುಬಂದಿವೆಯೆಂದು ಅವರು ಹೇಳಿದ್ದಾರೆ.
ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹಾಗೂ ಕೋಲ್ಕತಾ ಪೊಲೀಸರ ಪತ್ತೆದಾರಿ ಇಲಾಖೆಯು ಈಗಾಗಲೇ ಈ ಬಗ್ಗೆ ತನಿಖೆಯನ್ನು ಆರಂಭಿಸಿದೆ ಎಂದವರು ಹೇಳಿದ್ದಾರೆ.