ಬಿಹಾರದ ಮತಪಟ್ಟಿಯಿಂದ ಬಡವರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ: ರಾಹುಲ್ ಗಾಂಧಿ ಆರೋಪ
Photo credit: PTI
ಪಟ್ನಾ: ಬಡವರು ಹಾಗೂ ಸಾಮಾಜಿಕವಾಗಿ ದುರ್ಬಲವಾಗಿರುವ 65 ಲಕ್ಷ ಮಂದಿ ಮತದಾರರ ಹೆಸರುಗಳನ್ನು ಬಿಹಾರ ಮತಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಮತದಾರರ ಅಧಿಕಾರ ಯಾತ್ರೆ’ಯ ಭಾಗವಾಗಿ ಸೀತಾಮಾರ್ಹಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಹಾರದ ಜನತೆ ತಮ್ಮ ಮತದಾನದ ಹಕ್ಕನ್ನು ಕಸಿಯಲು ಬಿಜೆಪಿ ಹಾಗೂ ಚುನಾವಣಾ ಆಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
“ಮತಗಳ್ಳತನದಲ್ಲಿ ಭಾಗಿಯಾಗಿರುವ ಬಿಜೆಪಿ ಹಾಗೂ ಚುನಾವಣಾ ಆಯೋಗವನ್ನು ನಾವು ಬೆತ್ತಲೆ ಮಾಡಿದ್ದೇವೆ. ಅವರದನ್ನು ಮಹಾರಾಷ್ಟ್ರ, ಹರ್ಯಾಣ ಮತ್ತು ಕರ್ನಾಟಕದಲ್ಲಿ ಮಾಡಿದರು. ಇದೀಗ ಅದನ್ನು ಬಿಹಾರದಲ್ಲೂ ಪುನರಾವರ್ತಿಸಲು ಬಯಸುತ್ತಿದ್ದಾರೆ. ಆದರೆ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದರು.
ನಾನು ಹೇಳುತ್ತಿರುವ ಮತಗಳ್ಳತನಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪುರಾವೆಗಳನ್ನು ಒದಗಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಸಾರ್ವಜನಿಕ ಸಮಾವೇಶಕ್ಕೂ ಮುನ್ನ, ಜಾನಕಿ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದರು.