ನಾಸಿಕ್ ಕುಂಭಮೇಳ: ದೇವೇಂದ್ರ ಫಡ್ನವೀಸ್ ಸಭೆಗೆ ಹಾಜರಾಗದೆ ನಾಸಿಕ್ ನಲ್ಲಿ ಪ್ರತ್ಯೇಕ ಸಭೆ ನಡೆಸಿದ ಏಕನಾಥ ಶಿಂದೆ
ಏಕನಾಥ ಶಿಂದೆ | PC : PTI
ಮುಂಬೈ: 2027ರಲ್ಲಿ ನಡೆಯಲಿರುವ ಕುಂಭಮೇಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ನಾಸಿಕ್ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಎನ್ಎಂಆರ್ಡಿಎ)ದ ಪುನರ್ಪರಿಶೀಲನಾ ಸಭೆಯಿಂದ ನುಣುಚಿಕೊಂಡ ಎರಡು ದಿನಗಳ ಬಳಿಕ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶುಕ್ರವಾರ ನಾಸಿಕ್ಗೆ ಭೇಟಿ ನೀಡಿ ಕುಂಭಮೇಳಕ್ಕಾಗಿ ಪ್ರತ್ಯೇಕ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ. ಇದು ಆಡಳಿತ ಮೈತ್ರಿಕೂಟದ ಪಾಲುದಾರ ಪಕ್ಷಗಳ ನಡುವೆ ಬಿರುಕುಂಟಾಗಿರುವ ಊಹಾಪೋಹಗಳಿಗೆ ಕಾರಣವಾಗಿದೆ.
ಆದರೆ ಶಿಂದೆ,ಪಕ್ಷದ ರ್ಯಾಲಿಗಾಗಿ ತಾನು ನಾಸಿಕ್ನಲ್ಲಿದ್ದರಿಂದ ಪರಿಶೀಲನಾ ಸಭೆಯನ್ನು ನಡೆಸಿದ್ದೇನೆ,ಮೈತ್ರಿಕೂಟದಲ್ಲಿ ಯಾವುದೇ ಬಿರುಕಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ನಾಸಿಕ್ ಮತ್ತು ರಾಯಗಡಗಳ ಉಸ್ತುವಾರಿ ಸಚಿವರ ಹುದ್ದೆಗಳ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಫಡ್ನವೀಸ್ ಅವರು ಮುಂಬೈನಲ್ಲಿ ಕರೆದಿದ್ದ ಎನ್ಎಂಆರ್ಡಿಎದ ಪುನರ್ಪರಿಶೀಲನಾ ಸಭೆಗೆ ಶಿಂದೆಯವರನ್ನು ಆಹ್ವಾನಿಸಲಾಗಿತ್ತಾದರೂ ಅವರು ಗೈರುಹಾಜರಾಗಿದ್ದರು.
ಇದಕ್ಕೂ ಮುನ್ನ ಸಚಿವ ಗಿರೀಶ ಮಹಾಜನ ಅವರು ನಾಸಿಕ್ನಲ್ಲಿ ಸಭೆ ಕರೆದಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಶಿಂದೆ ನೇತೃತ್ವದ ಶಿವಸೇನೆ ಸಚಿವ ದಾದಾ ಭುಸೆ ಅವರು ಗೈರುಹಾಜರಾಗಿದ್ದರು. ನಾಸಿಕ್ ಉಸ್ತುವಾರಿ ಸಚಿವರ ಹುದ್ದೆಗಾಗಿ ಬಿಜೆಪಿ ಮತ್ತು ಶಿವಸೇನೆ ಎರಡೂ ಪಟ್ಟು ಹಿಡಿದಿರುವುದರಿಂದ ಆಡಳಿತ ಮೈತ್ರಿಕೂಟದಲ್ಲಿ,ವಿಶೇಷವಾಗಿ ಮಹಾಜನ ಮತ್ತು ಭುಸೆ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. 2027ರಲ್ಲಿ ನಾಸಿಕ್ನಲ್ಲಿ ಕುಂಭಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆಯು ಮಹತ್ವ ಪಡೆದುಕೊಂಡಿದೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಹಾಜನ,ಶಿಂದೆಯವರು ಕರೆದಿದ್ದ ಸಭೆಗೆ ತನ್ನನ್ನು ಆಹ್ವಾನಿಸಲಾಗಿತ್ತು,ಆದರೆ ಕೆಲವು ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
‘ಮುಖ್ಯಮಂತ್ರಿಗಳೂ ಈ ಸಂಬಂಧ ಸಭೆಯನ್ನು ಕರೆದಿದ್ದರು,ಅದಕ್ಕೂ ಹಾಜರಾಗಲು ನನಗೆ ಸಾಧ್ಯವಾಗಿರಲಿಲ್ಲ. ಕುಂಭಮೇಳವು ಸರಕಾರದಲ್ಲಿರುವ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಹೀಗಾಗಿ ಶಿಂಧೆ ಈ ಬಗ್ಗೆ ಸಭೆ ನಡೆಸಿದ್ದರಲ್ಲಿ ತಪ್ಪೇನಿದೆ? ಕುಂಭಮೇಳಕ್ಕೆ ಸಂಬಂಧಿಸಿದಂತೆ ಭುಸೆ ಕೂಡ ಸಭೆಯನ್ನು ನಡೆಸಿದ್ದರು. ನನ್ನನ್ನು ಆಹ್ವಾನಿಸಿರಲಿಲ್ಲ. ನನ್ನನ್ನು ಏಕೆ ಆಹ್ವಾನಿಸಿಲ್ಲ ಎಂದು ನಾನು ಕೇಳಲಿಲ್ಲ. ಈ ಸಲ ಕುಂಭಮೇಳವು ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ,ಹೀಗಾಗಿ ಸಭೆಗಳನ್ನು ನಡೆಸುವುದು ಮತ್ತು ಅಧಿಕಾರಿಗಳಿಂದ ಸಿದ್ಧತೆಗಳ ಬಗ್ಗೆ ಮಾಹಿತಿಗಳನ್ನು ಪಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದ ಮಹಾಜನ,ಆಡಳಿತ ಮೈತ್ರಿಕೂಟದ ಪಕ್ಷಗಳು ಅಥವಾ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಒತ್ತಿ ಹೇಳಿದರು.