ರಾಷ್ಟ್ರಧ್ವಜ ಕುರಿತ ರಸಪ್ರಶ್ನೆ : ವಿಜೇತರಿಗೆ ಕೇಂದ್ರ ಸಚಿವರ ಜೊತೆ ಸಿಯಾಚಿನ್ ಭೇಟಿಗೆ ಅವಕಾಶ
Photo - PTI
ಹೊಸದಿಲ್ಲಿ, ಆ.7: ರಾಷ್ಟ್ರಧ್ವಜದ ಕುರಿತು ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ (ಎಂವೈಎಎಸ್) ಸಚಿವಾಲಯವು ಆನ್‌ಲೈನ್ ಕ್ವಿಝ್ (ರಸಪ್ರಶ್ನೆ) ಕಾರ್ಯಕ್ರಮನ್ನು ಹಮ್ಮಿಕೊಂಡಿದೆ. ಈ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 21ರಿಂದ 29 ವರ್ಷ ವಯಸ್ಸಿನೊಳಗಿನ ಅಗ್ರ 25 ಮಂದಿಗೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಜೊತೆ ಸಿಯಾಚಿನ್ ಗ್ಲೇಸಿಯರ್‌ಗೆ ಭೇಟಿ ನೀಡುವ ಅವಕಾಶ ದೊರೆಯಲಿದೆ.
ಈ ರಸಪ್ರಶ್ನೆ ಕಾರ್ಯಕ್ರಮವು, ದೇಶಭಕ್ತಿಯನ್ನು ಪೋಷಿಸಲಿದೆ ಹಾಗೂ ಭಾರತದ ರಾಷ್ಟ್ರಧ್ವಜದ ಬಗ್ಗೆ ಅರಿವನ್ನು ಹೆಚ್ಚಿಸಲಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. ಮೈಭಾರತ್ ಜಾಲತಾಣ (mybharath.gov.in) ನಿರ್ವಹಿಸಲಿರುವ ಈ ಕ್ವಿಝ್‌ನಲ್ಲಿ ಭಾಗವಹಿಸುವಂತೆ ಹಾಗೂ ತ್ರಿವರ್ಣಧ್ವಜದ ಕುರಿತಂತೆ ತಮ್ಮ ಜ್ಞಾನವನ್ನು ಪರೀಕ್ಷಿಸುವಂತೆ ದೇಶದ ಎಲ್ಲಾ ಪೌರರಿಗೂ ಆಹ್ವಾನಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಬಹುಆಯ್ಕೆಯ ಪ್ರಶ್ನಾವಳಿಗಳನ್ನು ಈ ಸ್ಪರ್ಧೆಯು ಒಳಗೊಳ್ಳಲಿದೆ ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಇ-ಸರ್ಟಿಫಿಕೇಟ್ ದೊರೆಯಲಿದೆ. ವಿಜೇತರಲ್ಲಿ ಸಿಯಾಚಿನ್ ಗ್ಲೇಸಿಯರ್‌ಗೆ ಭೇಟಿ ನೀಡುವ ಅವಕಾಶವು 21ರಿಂದ 29 ವರ್ಷ ವಯಸ್ಸಿನೊಳಗಿನವರಿಗೆ ಮಾತ್ರ ಸೀಮಿತವಾಗಿದೆ.ಅತ್ಯಧಿಕ ಅಂಕಪಡೆದವರ ಪೈಕಿ, 25 ಮಂದಿ ವಿಜೇತರ ಅಂತಿಮ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಲಾಟರಿ ವ್ಯವಸ್ಥೆಯ ಮೂಲಕ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.