×
Ad

ಮಹಿಳಾ ಕೋಚ್ ನಿಂದ ಲೈಂಗಿಕ ದೌರ್ಜನ್ಯ: ರಾಷ್ಟ್ರೀಯ ಮಟ್ಟದ ಕಿರಿಯ ಮಹಿಳಾ ಬಾಕ್ಸರ್ ಆರೋಪ; ಪೋಷಕರಿಂದ ಎಫ್ ಐ ಆರ್ ದಾಖಲು

Update: 2025-06-30 19:14 IST

ಸಾಂದರ್ಭಿಕ ಚಿತ್ರ

 

ಹೊಸದಿಲ್ಲಿ: ರೋಹ್ಟಕ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಿಳಾ ಕೋಚ್, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ರಾಷ್ಟ್ರೀಯ ಮಟ್ಟದ ಕಿರಿಯ ಮಹಿಳಾ ಬಾಕ್ಸರ್ ಒಬ್ಬರು ಆರೋಪಿಸಿದ್ದು, ಇದರ ಬೆನ್ನಿಗೇ ಆಕೆಯ ಪೋಷಕರು ಮಹಿಳಾ ಕೋಚ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಈ ಎಫ್ಐಆರ್ ಪ್ರಕಾರ, ತನ್ನ ಮೇಲೆ ಪದೇ ಪದೇ ನಡೆದ ಮಾನಸಿಕ ಹಾಗೂ ದೈಹಿಕ ದೌರ್ಜನ್ಯದಿಂದ ಸಂತ್ರಸ್ತ ಬಾಕ್ಸರ್ ಖಿನ್ನತೆಗೆ ಒಳಗಾಗಿದ್ದಾಳೆ ಎಂದು ದೂರಲಾಗಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿರುವುದರಿಂದ, ತನ್ನ ಬಳಿ ಎಫ್ಐಆರ್ ಪ್ರತಿಯಿದ್ದರೂ, ಆರೋಪಿಯ ಹೆಸರನ್ನು ತಡೆಹಿಡಿಯಲಾಗಿದೆ ಎಂದು PTI ಸುದ್ದಿ ಸಂಸ್ಥೆ ಹೇಳಿಕೊಂಡಿದೆ.

ಈ ಕುರಿತು ಪ್ರತಿಕ್ರಿಯೆಗಾಗಿ ಭಾರತೀಯ ಬಾಕ್ಸಿಂಗ್ ಮಹಾ ಒಕ್ಕೂಟ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರವನ್ನು ಸಂಪರ್ಕಿಸಿದಾಗ, 17 ವರ್ಷದ ಸಂತ್ರಸ್ತೆಯಿಂದ ಬೆದರಿಕೆ ಹಾಗೂ ಕೆನ್ನೆಗೆ ಹೊಡೆದಿರುವ ಘಟನೆಗಳ ಕುರಿತು ದೂರು ಸ್ವೀಕರಿಸಿರುವುದನ್ನು ಈ ಕ್ರೀಡಾ ಸಂಸ್ಥೆಗಳು ಒಪ್ಪಿಕೊಂಡಿದ್ದರೂ, ಎಫ್ಐಆರ್ ನಲ್ಲಿ ಆರೋಪಿಸಿರುವಂತೆ ಲೈಂಗಿಕ ಕಿರುಕುಳ ನಡೆದಿರುವುದನ್ನು ನಿರಾಕರಿಸಿವೆ.

ರೋಹ್ಟಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, ಮಹಿಳಾ ಕೋಚ್ ಒಂದು ಬಾರಿ ನನ್ನ ವಸ್ತ್ರಗಳನ್ನು ಬಲವಂತವಾಗಿ ಬಿಚ್ಚಲು ಪ್ರಯತ್ನಿಸಿದರು, ಹಲವು ಬಾರಿ ನನ್ನ ಕೆನ್ನೆಗೆ ಹೊಡೆದರು. ನನ್ನ ವೃತ್ತಿಜೀವನವನ್ನು ಹಾಳುಗೆಡವುವ ಬೆದರಿಕೆ ಒಡ್ಡಿದರು ಹಾಗೂ ಉಳಿದ ಬಾಕ್ಸರ್ ಎದುರು ಕೆಟ್ಟ ನಡತೆಯ ವ್ಯಕ್ತಿ ಎಂದು ನನ್ನನ್ನು ನಿಂದಿಸಿದರು. ಹೀಗಾಗಿ ನಾನು ಏಕಾಂಗಿಯಾಗುವಂತಾಯಿತು ಎಂದು ಸಂತ್ರಸ್ತ ಮಹಿಳಾ ಬಾಕ್ಸರ್ ಆರೋಪಿಸಿದ್ದಾರೆ.

ಈ ದೂರನ್ನು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಿತ ಹಲ್ಲೆ) ಹಾಗೂ ಸೆಕ್ಷನ್ 351 (3) (ಕ್ರಿಮಿನಲ್ ಬೆದರಿಕೆ) ಪೋಕ್ಸೊ ಕಾಯ್ದೆಯ ಸೆಕ್ಷನ್ 10 (ತೀವ್ರ ಸ್ವರೂಪದ ಲೈಂಗಿಕ ದೌರ್ಜನ್ಯ) ಅಡಿ ಆರೋಪಿ ಮಹಿಳಾ ಕೋಚ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣದ ಸಂಬಂಧ ಅಗತ್ಯ ಬಿದ್ದಾಗಲೆಲ್ಲ ನಾವು ತನಿಖೆಗೆ ನೆರವು ನೀಡುತ್ತೇವೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಭರವಸೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News