×
Ad

2026 ಮಾರ್ಚ್ 31ರ ವೇಳೆಗೆ ನಕ್ಸಲಿಸಂ ನಿರ್ಮೂಲನೆಗೆ ಬದ್ಧ: ಸಿಆರ್‌ಪಿಎಫ್ ಡಿಜಿ

Update: 2025-05-14 22:20 IST

 ಜಿ.ಪಿ. ಸಿಂಗ್ | PC : NDTV

ಹೊಸದಿಲ್ಲಿ: ದೇಶದಲ್ಲಿ 2026 ಮಾರ್ಚ್ 31ರ ವೇಳೆಗೆ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಭದ್ರತಾ ಪಡೆಗಳು ನಿರಂತರ ಹಾಗೂ ದಿಟ್ಟ ಕಾರ್ಯಾಚರಣೆ ನಡೆಸುತ್ತಿವೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾ ನಿರ್ದೇಶಕ ಜಿ.ಪಿ. ಸಿಂಗ್ ಬುಧವಾರ ಹೇಳಿದ್ದಾರೆ.

2014ರಲ್ಲಿ ಪ್ರಾರಂಭವಾದ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು 2019ರಲ್ಲಿ ಹೆಚ್ಚು ತೀವ್ರಗೊಳಿಸಲಾಯಿತು. ನಕ್ಸಲಿಸಂ ಅನ್ನು ಮಟ್ಟ ಹಾಕುವ ಬದ್ಧತೆಯೊಂದಿಗೆ ಕೇಂದ್ರ ಅರೆ ಸೇನಾ ಪಡೆ ರಾಜ್ಯ ಪೊಲೀಸರ ಜೊತೆ ಸೇರಿ ಕಾರ್ಯ ನಿರ್ವಹಿಸಿತು ಎಂದು ಸಿಂಗ್ ತಿಳಿಸಿದ್ದಾರೆ.

ನಕ್ಸಲ್ ವಿರೋಧಿ ಕಾರ್ಯಾಚರಣೆ ಪರಿಣಾಮದ ಕುರಿತು ಗಮನ ಸೆಳೆದ ಅವರು, 2014ರಲ್ಲಿ ಅತಿ ಹೆಚ್ಚು ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ 35 ಇತ್ತು. 2025ರ ಹೊತ್ತಿಗೆ ಆ ಸಂಖ್ಯೆ 6ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ 126ರಿಂದ 18ಕ್ಕೆ ಇಳಿದಿದೆ ಎಂದಿದ್ದಾರೆ.

2014ರಲ್ಲಿ ಸಂಭವಿಸಿದ ಹಿಂಸಾಚಾರದ ಘಟನೆಗಳ ಸಂಖ್ಯೆ 1,080 ಆಗಿತ್ತು. ಅದು 2024ರಲ್ಲಿ 374ಕ್ಕೆ ಇಳಿಯಿತು. 2024ರಲ್ಲಿ ನಕ್ಸಲ್ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಭದ್ರತಾ ಸಿಬ್ಬಂದಿಯ ಸಂಖ್ಯೆ 287 ಆಗಿತ್ತು. ಅದು 2024ರಲ್ಲಿ 19ಕ್ಕೆ ಇಳಿಯಿತು. ಈ ಅವಧಿಯಲ್ಲಿ ಹತ್ಯೆಗೈಯಲಾದ ನಕ್ಸಲೀಯರ ಸಂಖ್ಯೆ 2089ಕ್ಕೆ ತಲುಪಿತ್ತು ಎಂದು ಅವರು ತಿಳಿಸಿದ್ದಾರೆ.

2024ರಲ್ಲಿ 928ಕ್ಕೂ ಅಧಿಕ ನಕ್ಸಲೀಯರು ಭದ್ರತಾ ಪಡೆಯ ಮುಂದೆ ಶರಣಾಗತರಾಗಿದ್ದಾರೆ. ಈ ವರ್ಷ ಇದುವರೆಗೆ ಮತ್ತೆ 718 ನಕ್ಸಲೀಯರು ಶರಣಾಗತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಕ್ಸಲೀಯರನ್ನು ಅವರ ಅಡಗುದಾಣಗಳಿಂದ ಹೊರಗಟ್ಟಲು ಭದ್ರತಾ ಪಡೆ ಪ್ರಯತ್ನಿಸುತ್ತಿದೆ. ಇಂತಹ ಪ್ರದೇಶಗಳಲ್ಲಿ 68 ರಾತ್ರಿ ಲ್ಯಾಂಡಿಂಗ್ ಹೆಲಿಪ್ಯಾಡ್‌ ಗಳಲ್ಲದೆ, 320 ಹೊಸ ಭದ್ರತಾ ಶಿಬಿರಗಳನ್ನು ಇದುವರೆಗೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News