×
Ad

ಕರೂರು ಕಾಲ್ತುಳಿತ ಪ್ರಕರಣ : ಲೋಪಗಳನ್ನು ಪರಿಶೀಲಿಸಲು ತಮಿಳುನಾಡಿಗೆ ಎನ್‌ಡಿಎ ನಿಯೋಗ ಭೇಟಿ

Update: 2025-09-30 19:47 IST
PC | x.com/Tejasvi_Surya

ಕೊಯಮತ್ತೂರು,ಸೆ.30: ಶನಿವಾರ ಕರೂರಿನಲ್ಲಿ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ ಅವರ ರ್ಯಾಲಿಯಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಕಾರಣವಾಗಿದ್ದ ಸಂದರ್ಭಗಳನ್ನು ಪರಿಶೀಲಿಸಲು ಸಂಸದೆ ಹೇಮಾಮಾಲಿನಿ ನೇತೃತ್ವದ ಎಂಟು ಸದಸ್ಯರ ಬಿಜೆಪಿ ನಿಯೋಗವು ಮಂಗಳವಾರ ತಮಿಳುನಾಡಿಗೆ ಬಂದಿಳಿದಿದೆ. ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದು, ಸುಮಾರು 60 ಜನರು ಗಾಯಗೊಂಡಿದ್ದಾರೆ.

ಕರೂರಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಾಮಾಲಿನಿ ಮತ್ತು ನಿಯೋಗದ ಸದಸ್ಯರು ಮೃತರ ಕುಟುಂಬಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿದರು ಮತ್ತು ಏನು ತಪ್ಪು ನಡೆದಿತ್ತು ಎನ್ನುವುದನ್ನು ತಿಳಿದುಕೊಳ್ಳಲು ನಿಯೋಗವು ಗಮನವನ್ನು ಕೇಂದ್ರೀಕರಿಸಲಿದೆ ಎಂದು ತಿಳಿಸಿದರು.

‘17 ಮಹಿಳೆಯರು ಮತ್ತು ಸಣ್ಣಮಕ್ಕಳು ಸೇರಿದಂತೆ 41 ಜನರು ಮೃತಪಟ್ಟಿದ್ದು ದುಃಖಕರವಾಗಿದೆ. ಕಾಲ್ತುಳಿತಕ್ಕೆ ಯಾರು ಕಾರಣರಾಗಿದ್ದರು, ಸಂಘಟಕರೇ ಅಥವಾ ಆಡಳಿತವೇ ಎನ್ನುವುದನ್ನು ನಾವು ಕಂಡುಕೊಳ್ಳಬೇಕಿದೆ. ನಾವು ಸಹ ರಾಜಕೀಯ ರ್ಯಾಲಿಗಳು ಮತ್ತು ಪ್ರಚಾರಗಳನ್ನು ನಡೆಸುತ್ತೇವೆ, ಆದರೆ ಆಡಳಿತ ಮತ್ತು ಪೋಲಿಸರು ಅಲ್ಲಿರುತ್ತಾರೆ. ಇಲ್ಲಿ ಕೇವಲ 10,000 ಜನರಿಗೆ ಸ್ಥಳಾವಕಾಶ ಕಲ್ಪಿಸಬಹುದಿತ್ತು, ಆದರೆ 30,000ಕ್ಕೂ ಅಧಿಕ ಜನರು ಸೇರಿದ್ದರು ಎಂದು ಅವರು ಹೇಳುತ್ತಿದ್ದಾರೆ. ವಿಜಯ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ ಮತ್ತು ಹೆಚ್ಚು ಜನರು ಸೇರದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು. ಅವರು ಬೇರೆ ಸ್ಥಳವನ್ನು ಕೋರಿದ್ದರು, ಆದರೆ ಪ್ರಚಾರ ಅಭಿಯಾನಕ್ಕಾಗಿ ಅವರಿಗೆ ಈ ತೀವ್ರ ಇಕ್ಕಟ್ಟಿನ ಜಾಗ ನೀಡಲಾಗಿತ್ತು ಎಂದು ನನಗೆ ಮಾಹಿತಿ ನೀಡಲಾಗಿದೆ ’ಎಂದು ಹೇಮಾಮಾಲಿನಿ ಹೇಳಿದರು.

ತಮ್ಮ ತಂಡವು ಸ್ಥಳೀಯ ನಿವಾಸಿಗಳು,ಅಧಿಕಾರಿಗಳು ಮತ್ತು ಮೃತರ ಕುಟುಂಬಗಳನ್ನು ಭೇಟಿಯಾಗಿ ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಹೇಳಿದ ಬಿಜೆಪಿ ಸಂಸದ ಅನುರಾಗ ಠಾಕೂರ್ ಅವರು,‘ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲೆಂದು ನಾವು ಪ್ರಾರ್ಥಿಸುತ್ತೇವೆ. ಏನು ತಪ್ಪು ನಡೆದಿತ್ತು ಎನ್ನುವದನ್ನು ತಿಳಿದುಕೊಳ್ಳಲು ಮತ್ತು ಇಂತಹ ದುರಂತಗಳು ಮರುಕಳಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿಯೊಬ್ಬರನ್ನೂ ಭೇಟಿಯಾಗುತ್ತೇವೆ. ತಂಡದ ವರದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News