×
Ad

“ನಮ್ಮ ತಂಟೆಗೆ ಬರಬೇಡಿ” ಎಂದು ಪೋಸ್ಟ್ ಮಾಡಿದ್ದ ಬಿಜೆಪಿಗೆ ಶಶಿ ತರೂರ್ ತರಾಟೆ

Update: 2025-05-10 20:28 IST

ಶಶಿ ತರೂರ್ | PC : PTI  

ಹೊಸದಿಲ್ಲಿ: ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳ ಸಂದರ್ಭಗಳಲ್ಲಿ ಪ್ರತೀಕಾರವನ್ನೂ ತೀರಿಸಿಕೊಂಡಿರಲಿಲ್ಲ ಅಥವಾ ಪಾಠವನ್ನೂ ಕಲಿಸಿರಲಿಲ್ಲ ಎಂಬ ಶೀರ್ಷಿಕೆ ಹೊಂದಿರುವ ವೀಡಿಯೊವೊಂದನ್ನು ಶುಕ್ರವಾರ ರಾತ್ರಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿಯ ನಡೆಯನ್ನು ತೀಕ್ಷ್ಣವಾಗಿ ಖಂಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ಇದು ಸೂಕ್ತವೂ ಅಲ್ಲ, ಪಕ್ವತೆಯೂ ಅಲ್ಲ. ಇದೊಂದು ಜಾಹೀರಾತಾಗಿದ್ದು, ದೇಶವನ್ನು ರಾಜಕೀಯವಾಗಿ ವಿಭಜಿಸುವ ಚಿಲ್ಲರೆ ಪ್ರಯತ್ನವಾಗಿದೆ” ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೆ, ಸದರಿ ಪೋಸ್ಟ್ ಅನ್ನು ಅಳಿಸಿ ಹಾಕುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಉಲ್ಬಣಗೊಂಡಿರುವ ಬೆನ್ನಿಗೇ, ಶುಕ್ರವಾರ ರಾತ್ರಿ ಆಡಳಿತಾರೂಢ ಬಿಜೆಪಿ ಪಕ್ಷವು ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಆ ವೀಡಿಯೊದಲ್ಲಿ ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳ ಸಂದರ್ಭದಲ್ಲಿ ಪ್ರತೀಕಾರವನ್ನೂ ತೀರಿಸಿಕೊಂಡಿರಲಿಲ್ಲ ಅಥವಾ ಪಾಠವನ್ನೂ ಕಲಿಸಿರಲಿಲ್ಲ ಎಂದು ಆರೋಪಿಸಿದೆ.

ಈ ವೀಡಿಯೊ ಮಹಿಳೆಯೊಬ್ಬರು ನೋವಿನಿಂದ ಅಳುತ್ತಿರುವ ಫೋಟೊದೊಂದಿಗೆ ಪ್ರಾರಂಭಗೊಳ್ಳುತ್ತದೆ. ಈ ಫೋಟೊಗೆ “2005ರ ದಿಲ್ಲಿ ಸ್ಫೋಟ, 62ಕ್ಕೂ ಹೆಚ್ಚು ಮಂದಿ ಸಾವು” ಎಂಬ ಕೆಂಪು ಬಣ್ಣದಲ್ಲಿನ ದಪ್ಪ ಅಕ್ಷರಗಳ ಶೀರ್ಷಿಕೆಯನ್ನು ನೀಡಲಾಗಿದೆ. ನಂತರ, ಈ ವೀಡಿಯೊದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಫೋಟೊವನ್ನು ಪ್ರದರ್ಶಿಸಲಾಗಿದ್ದು, ಆ ಫೋಟೊಗೆ “2006ರಲ್ಲಿನ ಶಾಂತಿ ಮಾತುಕತೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ನಂತರ, ಈ ವೀಡಿಯೊದಲ್ಲಿ “2006ರಲ್ಲಿನ ಮುಂಬೈ ರೈಲು ಸ್ಫೋಟ, 209ಕ್ಕೂ ಹೆಚ್ಚು ಮಂದಿ ಮೃತ್ಯು” ಎಂಬ ಶೀರ್ಷಿಕೆಯನ್ನು ಹೊಂದಿರುವ ಫೋಟೊವನ್ನು ತೋರಿಸಲಾಗಿದೆ.

ಇದಾದ ನಂತರ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಾಝಾ ಗಿಲಾನಿಯೊಂದಿಗಿರುವ ಫೋಟೊವನ್ನು ತೋರಿಸುತ್ತದೆ. ಆ ಫೋಟೊಗೆ “2007ರಲ್ಲಿನ ಶಾಂತಿ ಮಾತುಕತೆ” ಎಂಬ ಶೀರ್ಷಿಕೆ ನೀಡಲಾಗಿದೆ. ಬಳಿಕ, 2008ರ ಮುಂಬೈ ಭಯೋತ್ಪಾದಕ ದಾಳಿಯ ಚಿತ್ರವನ್ನು ತೋರಿಸುವ ಈ ವೀಡಿಯೊ, ಆ ಚಿತ್ರಕ್ಕೆ “166ಕ್ಕೂ ಹೆಚ್ಚು ಮಂದಿ ಮೃತ್ಯು” ಎಂಬ ಶೀರ್ಷಿಕೆ ನೀಡಿದೆ.

ಬಳಿಕ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಫೋಟೊವನ್ನು ಪ್ರದರ್ಶಿಸುವ ಈ ವೀಡಿಯೊ, “ಯಾವುದೇ ಪ್ರತಿಕ್ರಿಯೆ ಇಲ್ಲ; ಯಾವುದೇ ಪಾಠ ಕಲಿಸಲಿಲ್ಲ” ಎಂಬ ಶೀರ್ಷಿಕೆಯನ್ನು ಆ ಫೋಟೊಗೆ ನೀಡಿದೆ. ಬಳಿಕ ಭಾರತದಲ್ಲಿ 2010, 2011 ಹಾಗೂ 2013ರಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳ ಚಿತ್ರಗಳನ್ನು ಪ್ರದರ್ಶಿಸುವ ಈ ವೀಡಿಯೊ, ‘ಶಾಂತಿ ಮಾತುಕತೆ’ ಎಂಬ ಅದೇ ಶೀರ್ಷಿಕೆಯನ್ನು ಆ ಚಿತ್ರಗಳಿಗೂ ನೀಡಿದೆ.

ಕೊನೆಗೆ, ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಪ್ರದರ್ಶಿಸುವ ಈ ವೀಡಿಯೊ, ಆ ಚಿತ್ರದ ಹಿನ್ನೆಲೆಯಲ್ಲಿ “ಆರಂಭ್ ಹೈ ಪ್ರಚಂಡ್” (ಪ್ರಚಂಡ ಆರಂಭವಾಗಿದೆ) ಎಂಬ ಗೀತೆಯನ್ನು ಅಳವಡಿಸಿದೆ. ನಂತರ, ಬದಲಾಗುವ ಶೀರ್ಷಿಕೆಯು, “ಭಯೋತ್ಪಾದನೆಯನ್ನು ಬೆಂಬಲಿಸುವ ದೇಶದೊಂದಿಗೆ ಇನ್ನಾವುದೇ ಮಾತುಕತೆಗಳಿಲ್ಲ” ಎಂದು ಘೋಷಿಸುತ್ತದೆ.

ಇದರ ಬೆನ್ನಿಗೇ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ದೃಶ್ಯಾಳವಳಿಗಳನ್ನು ಪ್ರದರ್ಶಿಸುವ ಈ ವೀಡಿಯೊ, “ಅವರು ಪ್ರತಿ ಭಯೋತ್ಪಾದಕನನ್ನು ನರಕಕ್ಕೆ ಕಳಿಸುವ ಕಾರ್ಯಾಚರಣೆಯಲ್ಲಿದ್ದಾರೆ” ಎಂಬ ಶೀರ್ಷಿಕೆಯನ್ನು ತೋರಿಸುತ್ತದೆ.

ಈ ವೀಡಿಯೊಗೆ, “ಶತ್ರುಗಳಿಗೆ ನೀಡಲಾಗಿರುವ ಸಂದೇಶ ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ. ನಮ್ಮ ತಂಟೆಗೆ ಬರಬೇಡಿ! ಯುಪಿಎ ಸರಕಾರದ ನಿಷ್ಕ್ರಿಯತೆಯಂತಲ್ಲದೆ, ನೂತನ ಭಾರತಕ್ಕೆ ನಿರರ್ಥಕ ಶಾಂತಿ ಮಾತುಕತೆಗಳನ್ನು ನಡೆಸುವ ಸಹನೆ ಇಲ್ಲ”, ಎಂಬ ಶೀರ್ಷಿಕೆ ನೀಡಲಾಗಿದೆ.

ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೂ ಗುರಿಯಾಗಿದೆ. ಇದರ ಬೆನ್ನಿಗೇ, ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ಇದೊಂದು ನಮ್ಮನ್ನು ರಾಜಕೀಯವಾಗಿ ವಿಭಜಿಸುವ ಚಿಲ್ಲರೆ ಪ್ರಯತ್ನವಾಗಿದೆ. ಈ ಪೋಸ್ಟ್ ಜಾಹೀರಾತಿನಂತಿದ್ದು, ಇದು ಸೂಕ್ತವೂ ಅಲ್ಲ, ಪಕ್ವತೆಯೂ ಅಲ್ಲ” ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೆ, ಈ ಪೋಸ್ಟ್ ಅನ್ನು ಅಳಿಸಿ ಹಾಕುವಂತೆಯೂ ಬಿಜೆಪಿಯನ್ನು ಆಗ್ರಹಿಸಿದ್ದಾರೆ.

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀಸರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಡಿ ಯಶಸ್ವಿ ವಾಯು ದಾಳಿ ನಡೆಸಿ, ಕನಿಷ್ಠ ಪಕ್ಷ ಒಂಬತ್ತು ಭಯೋತ್ಪಾದಕರ ಶಿಬಿರಗಳನ್ನು ನಾಶಗೊಳಿಸಿತ್ತು. ಇದರ ಬೆನ್ನಿಗೇ, ಚುನಾವಣಾ ರಾಜ್ಯವಾದ ಬಿಹಾರದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಆಪರೇಷನ್ ಸಿಂಧೂರ್ ನ ಚಿತ್ರಗಳು ಕಾಣಿಸಿಕೊಂಡು ವಿವಾದ ಭುಗಿಲೆದ್ದಿತ್ತು. ಇದರ ಬೆನ್ನಿಗೇ, ಆಡಳಿತಾರೂಢ ಬಿಜೆಪಿ ಕೂಡಾ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಯಶಸ್ಸನ್ನು ತನ್ನ ಮುಡಿಗೇರಿಸಿಕೊಳ್ಳಲು ಹಾಗೂ ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳಿಗೆ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ನಿಷ್ಕ್ರಿಯತೆಯೇ ಕಾರಣ ಎಂದು ಬಿಂಬಿಸಲು ಮುಂದಾಗಿರುವ ನಡೆಯು ವ್ಯಾಪಕ ಸಾರ್ವತ್ರಿಕ ಟೀಕೆಗೆ ಗುರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News