ಅಮೆರಿಕದಿಂದ ಗಡಿಪಾರಾದ 12 ಅಕ್ರಮ ವಲಸಿಗರು ಹೊಸದಿಲ್ಲಿಗೆ ಆಗಮನ; ಪನಾಮದಿಂದ ರವಾನೆ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಅಮೆರಿಕದಿಂದ ಗಡಿಪಾರು ಮಾಡಲ್ಪಟ್ಟ 12 ಮಂದಿ ಮಂದಿ ಭಾರತೀಯ ಪ್ರಜೆಗಳು ರವಿವಾರ ಸಂಜೆ ಹೊಸದಿಲ್ಲಿಯಲ್ಲಿರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನಕ್ಕೆ ಆಗಮಿಸಿದರು.
ಈ 12 ಮಂದಿ ಭಾರತೀಯರನ್ನು ಪನಾಮಕ್ಕೆ ಮೊದಲು ಗಡಿಪಾರು ಮಾಡಲಾಗಿದ್ದು, ಅಲ್ಲಿಂದ ಅವರನ್ನು ಟರ್ಕಿಶ್ ಏರ್‌ಲೈನ್ಸ್ ವಿಮಾನದ ಮೂಲಕ ಹೊಸದಿಲ್ಲಿಗೆ ಕರೆತರಲಾಗಿದೆ.
ಟ್ರಂಪ್ ಸರಕಾರವು ಕಳೆದ ಮೂರು ವಾರಗಳಲ್ಲಿ ಭಾರತಕ್ಕೆ ಗಡಿಪಾರು ಮಾಡಿದ ಅಕ್ರಮ ವಲಸಿಗ ಭಾರತೀಯರ ನಾಲ್ಕನೇ ತಂಡ ಇದಾಗಿದೆ.
ಅಕ್ರಮ ವಲಸಿಗರ ರವಾನೆ ಕೇಂದ್ರವಾಗಿ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಾದ ಪನಾಮ ಹಾಗೂ ಕೋಸ್ಟರಿಕಾಗಳನ್ನು ಬಳಸಿಕೊಳ್ಳಲು ಅಮೆರಿಕವು ಆ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಳೆದ ವಾರ ಅಮೆರಿಕವು ಭಾರತೀಯರು ಸೇರಿದಂತೆ ವಿವಿಧ ದೇಶಗಳ 299 ಮಂದಿ ಅಕ್ರಮ ವಲಸಿಗರನ್ನು ಪನಾಮಕ್ಕೆ ಗಡಿಪಾರು ಮಾಡಿತ್ತು.
ಈ ಒಪ್ಪಂದದ ಪ್ರಕಾರ ಅಮೆರಿಕವು ವಿವಿಧ ಏಶ್ಯನ್ ರಾಷ್ಟ್ರಗಳ ದಾಖಲೆ ರಹಿತ ಮತ್ತು ಸ್ವದೇಶಕ್ಕೆ ಹಿಂತಿರುಗಲು ನಿರಾಕರಿಸುತ್ತಿರುವ ಅಥವಾ ಆಯಾ ದೇಶಗಳ ಸರಕಾರಗಳು ನಿರಾಕರಿಸಿದ ನಿರಾಶ್ರಿತರನ್ನು ಈ ದೇಶಗಳಿಗೆ ವರ್ಗಾಯಿಸಲಾಗುತ್ತದೆ.
ಪನಾಮದಿಂದ ಇಂದು ಹೊಸದಿಲ್ಲಿಗೆ ಆಗಮಿಸಿದ 12 ಮಂದಿ ಭಾರತೀಯರನ್ನು ಟರ್ಕಿಶ್ ಏರ್‌ಲೈನ್ ವಿಮಾನದ ಮೂಲಕ ಇಸ್ತಾಂಬುಲ್ ಮೂಲಕ ಹೊಸದಿಲ್ಲಿಗೆ ತರಲಾಗಿದೆ. ಗಡಿಪಾರಾದವರಲ್ಲಿ ನಾಲ್ವರು ಪಂಜಾಬ್‌ನವರಾಗಿದ್ದು, ತಲಾ ಮೂವರು ಹರ್ಯಾಣ ಹಾಗೂ ಉತ್ತರಪ್ರದೇಶದವರು. ಇನ್ನೋರ್ವ ವ್ಯಕ್ತಿಯ ಗುರುತನ್ನು ಇನ್ನೂ ದೃಢಪಡಿಸಲಾಗಿಲ್ಲ.