×
Ad

ನೂತನ ಶಿಕ್ಷಣ ನೀತಿ: ವರ್ಷದಲ್ಲಿ ಎರಡು ಬಾರಿ ವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನ

Update: 2023-08-23 21:18 IST

ಸಾಂದರ್ಭಿಕ ಚಿತ್ರ (PTI) 

ಹೊಸದಿಲ್ಲಿ: ನೂತನ ಪಠ್ಯಕ್ರಮದ ಅನ್ವಯ, ಸಾಂಪ್ರದಾಯಿಕ ವಾರ್ಷಿಕ ಬೋರ್ಡ್ ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಇನ್ನು ಬೋರ್ಡ್ ಪರೀಕ್ಷೆಗಳು ವರ್ಷಕ್ಕೆ ಎರಡು ಬಾರಿ ನಡೆಯಲಿವೆ. ಈ ಮೂಲಕ ಸಾಧ್ಯವಾದಷ್ಟು ಗರಿಷ್ಠ ಅಂಕಗಳನ್ನು ಗಳಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸಲಿದೆ.

ಒಂದೇ ವಾರ್ಷಿಕ ಪರೀಕ್ಷೆಯ ವ್ಯವಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಉಂಟಾಗುವ ಅಗಾಧ ಒತ್ತಡದ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶವನ್ನು ನೂತನ ಪಠ್ಯಕ್ರಮ ಹೊಂದಿದೆ.

ವಿದ್ಯಾರ್ಥಿಗಳು ಒಂದು ಭಾರತೀಯ ಭಾಷೆ ಸೇರಿದಂತೆ ಎರಡು ಭಾಷೆಗಳನ್ನು ಕಲಿಯಬೇಕು ಎಂದು ನೂತನ ಶಿಕ್ಷಣ ನೀತಿ (ಎನ್‌ಇಪಿ) ಹೇಳುತ್ತದೆ. ಈ ನೀತಿಯು ಭಾಷಾ ವೈವಿಧ್ಯತೆಗೆ ಒತ್ತು ನೀಡುವುದು ಮಾತ್ರವಲ್ಲದೆ, ದೇಶದ ಶ್ರೀಮಂತ ಪರಂಪರೆಯನ್ನು ಗುರುತಿಸುತ್ತದೆ ಎಂದು ಅದು ಅಭಿಪ್ರಾಯಪಡುತ್ತದೆ.

‘‘11 ಮತ್ತು 12ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಕಲಿಯಬೇಕು. ಹಾಗೂ ಅವುಗಳ ಪೈಕಿ ಒಂದು ಭಾರತೀಯ ಭಾಷೆಯಾಗಿರಬೇಕು’’ ಎಂದು ಅಂತಿಮ ಎನ್‌ಸಿಫ್ (ನ್ಯಾಶನಲ್ ಕರಿಕ್ಯಲಮ್ ಫ್ರೇಮ್‌ವರ್ಕ್- ರಾಷ್ಟ್ರೀಯ ಪಠ್ಯ ಚೌಕಟ್ಟು) ದಾಖಲೆ ಹೇಳುತ್ತದೆ.

ತಿಂಗಳುಗಳ ಅವಧಿಯ ಬೋಧನೆ ಮತ್ತು ಬಾಯಿಪಾಠವನ್ನು ಅವಲಂಬಿಸುವುದನ್ನು ಬಿಟ್ಟು, ವಿಷಯಗಳನ್ನು ಅರ್ಥಮಾಡಿಕೊಳ್ಳುವ ವಿದ್ಯಾರ್ಥಿಗಳ ಸಾಮರ್ಥ್ಯದ ಮೌಲ್ಯಮಾಪನಕ್ಕೆ ಒತ್ತು ನೀಡುತ್ತದೆ.

‘‘ ಉತ್ತಮ ನಿರ್ವಹಣೆ ನೀಡಲು ವಿದ್ಯಾರ್ಥಿಗಳಿಗೆ ಬೇಕಾದಷ್ಟು ಸಮಯ ಮತ್ತು ಅವಕಾಶ ನೀಡಲು ಬೋರ್ಡ್ ಪರೀಕ್ಷೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಲಾಗುವುದು. ಹಾಗಾಗಿ, ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿರುವ ಹಾಗೂ ತಯಾರಾಗಿದ್ದೇವೆ ಎಂದು ಭಾವಿಸಿರುವ ವಿಷಯಗಳಲ್ಲಿ ಬೋರ್ಡ್ ಪರೀಕ್ಷೆಗಳನ್ನು ಬರೆಯಬಹುದಾಗಿದೆ’’ ಎಂದು ನೂತನ ಶಿಕ್ಷಣ ನೀತಿ ಹೇಳುತ್ತದೆ.

ಕಲೆ, ವಿಜ್ಞಾನ ಮತ್ತು ವಾಣಿಜ್ಯದಂತಹ ವಿಭಾಗಗಳಲ್ಲಿನ 11 ಮತ್ತು 12ನೇ ತರಗತಿಗಳ ವಿಷಯಗಳ ಆಯ್ಕೆಯನ್ನು ಸುಲಲಿತಗೊಳಿಸಲು ವಿಷಯಗಳ ಆಯ್ಕೆಯನ್ನು ನಿರ್ಬಂಧಿಸಲಾಗುವುದಿಲ್ಲ.

“ಭವಿಷ್ಯದ ದಿನಗಳಲ್ಲಿ ಶಾಲಾ ಪರೀಕ್ಷಾ ಮಂಡಳಿಗಳು ಆಗ್ರಹವನ್ನು ಆಧರಿಸಿ ಪರೀಕ್ಷೆಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಭವಿಷ್ಯದ ದಿನಗಳಲ್ಲ್ಲಿ ಅಭಿವೃದ್ಧಿಪಡಿಸಿಕೊಳ್ಳಬೇಕು. ಮಂಡಳಿ ಪರೀಕ್ಷೆಯಲ್ಲದೆ, ಪರೀಕ್ಷಾ ಅಭಿವರ್ಧಕರು ಹಾಗೂ ಮೌಲ್ಯಮಾಪಕರು ತಮ್ಮ ಕೆಲಸವನ್ನು ನಿರ್ವಹಿಸುವುದಕ್ಕೂ ಮುನ್ನ ವಿಶ್ವವಿದ್ಯಾಲಯದ ಪ್ರಮಾಣೀಕೃತ ಪದವಿಯನ್ನು ತೆಗೆದುಕೊಳ್ಳಬೇಕು” ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಹೇಳಲಾಗಿದೆ.

ಪಠ್ಯಪುಸ್ತಕಗಳ ವೆಚ್ಚವನ್ನು ತಗ್ಗಿಸುವ ಸಲುವಾಗಿ ತರಗತಿಗಳಲ್ಲಿ ಪಠ್ಯಪುಸ್ತಕಗಳನ್ನು ಪೂರೈಸುವ ಹಾಲಿ ಅಭ್ಯಾಸವನ್ನು ತಡೆಗಟ್ಟಲಾಗುವುದು ಎಂದೂ ನೂತನ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News