×
Ad

ವರದಕ್ಷಿಣೆ ಕಿರುಕುಳ ಆರೋಪ: ನವವಿವಾಹಿತೆ ಆತ್ಮಹತ್ಯೆ

Update: 2025-06-30 13:04 IST

Photo credit: India Today

ಚೆನ್ನೈ: ವರದಕ್ಷಿಣೆ ಕಿರುಕುಳದಿಂದ 27 ವರ್ಷದ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ನಲ್ಲಿ ನಡೆದಿದೆ. ಮಹಿಳೆಗೆ ಆಕೆಯ ಪತಿ, ಮಾವ ಹಾಗೂ ಅತ್ತೆ ಆಕೆಗೆ ಇನ್ನೂ ಹೆಚ್ಚು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಮೃತ ಮಹಿಳೆಯನ್ನು ಗಾರ್ಮೆಂಟ್ಸ್ ಕಾರ್ಖಾನೆಯ ಮಾಲಕರಾದ ಅಣ್ಣಾದುರೈ ಎಂಬವರ ಪುತ್ರಿ ರಿಧ್ಯಾನಾ ಎಂದು ಗುರುತಿಸಲಾಗಿದೆ. ಈ ವರ್ಷದ ಎಪ್ರಿಲ್ ತಿಂಗಳಲ್ಲಿ 28 ವರ್ಷದ ಕವಿನ್ ಕುಮಾರ್ ಎಂಬ ಯುವಕನನ್ನು ರಿಧ್ಯಾನಾ ವಿವಾಹವಾಗಿದ್ದರು. ವರದಿಗಳ ಪ್ರಕಾರ, ವಿವಾಹದ ಸಂದರ್ಭದಲ್ಲಿ ಯುವಕನಿಗೆ 100 ಸವರನ್ (800 ಗ್ರಾಂ) ಚಿನ್ನಾಭರಣಗಳು ಹಾಗೂ 70 ಲಕ್ಷ ರೂ. ಮೌಲ್ಯದ ವೋಲ್ವೊ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ಹೇಳಲಾಗಿದೆ.

ನಾನು ಮೊಂಡಿಪಾಳಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ಎಂದು ಮನೆ ತೊರೆದಿದ್ದ ರಿಧ್ಯಾರನಾ, ಮಾರ್ಗಮಧ್ಯೆ ತನ್ನ ಕಾರನ್ನು ನಿಲ್ಲಿಸಿ, ವಿಷಕಾರಿ ಕೀಟನಾಶಕ ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ವರದಿಯಾಗಿದೆ. ಆ ಪ್ರದೇಶದಲ್ಲಿ ದೀರ್ಘಕಾಲದಿಂದ ಕಾರೊಂದು ನಿಂತಿರುವುದನ್ನು ಕಂಡ ಸ್ಥಳೀಯರು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಾರಿನ ಪರಿಶೀಲನೆ ನಡೆಸಿದಾಗ, ರಿಧ್ಯಾನಾ ಮೃತದೇಹ ಪತ್ತೆಯಾಗಿದೆ.

ಮೂಲಗಳ ಪ್ರಕಾರ, ನನಗೆ ಕಿರುಕುಳವನ್ನು ಸಹಿಸಲು ಅಸಾಧ್ಯವಾಗಿರುವುದರಿಂದ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತನ್ನ ಸಾವಿಗೂ ಮುನ್ನ ತನ್ನ ತಂದೆಗೆ ಏಳು ವಾಟ್ಸ್ ಆ್ಯಪ್ ಸಂದೇಶಗಳನ್ನು ರವಾನಿಸಿದ್ದ ರಿಧ್ಯಾನಾ, ತನ್ನ ನಿರ್ಧಾರಕ್ಕಾಗಿ ಅವರಲ್ಲಿ ಕ್ಷಮೆಯನ್ನೂ ಕೋರಿದ್ದಳು ಎನ್ನಲಾಗಿದೆ.

ರಿಧ್ಯಾನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸುದ್ದಿ ತಿಳಿದು ಆಸ್ಪತ್ರೆ ಬಳಿಗೆ ಧಾವಿಸಿದ ಆಕೆಯ ಸಂಬಂಧಿಕರು, ನ್ಯಾಯಕ್ಕಾಗಿ ಆಗ್ರಹಿಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತ ಮಹಿಳೆಯ ಪತಿ ಕವಿನ್ ಕುಮಾರ್, ಮಾವ ಈಶ್ವರ ಮೂರ್ತಿ ಹಾಗೂ ಅತ್ತೆ ಚಿತ್ರಾದೇವಿಯನ್ನು ಬಂಧಿಸಿದ್ದಾರೆ. ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News