×
Ad

ಲೋಕಲ್ ಸರ್ಕಲ್ಸ್ ಸಮೀಕ್ಷೆ: ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ!

Update: 2023-10-02 20:22 IST

ಹೊಸ ದಿಲ್ಲಿ: ಕಳೆದ ಮೂರು ವರ್ಷಗಳಿಂದ ತಾವು ವಾಸಿಸುತ್ತಿರುವ ಜಿಲ್ಲೆಗಳು ಅಥವಾ ನಗರಗಳಲ್ಲಿ ಕಾರ್ಯಾಚರಿಸುತ್ತಿರುವ ಸಾರ್ವಜನಿಕ ಶೌಚಾಲಯಗಳ ಲಭ್ಯತೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲವೆಂದು ಶೇ. 50ಕ್ಕೂ ಹೆಚ್ಚು ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಅಭಿಪ್ರಾಯ ಪಟ್ಟಿದ್ದಾರೆ, ಎಂದು ಸಮುದಾಯ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಯಾದ ಲೋಕಲ್ ಸರ್ಕಲ್ಸ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ ಎಂದು theprint.in ವರದಿ ಮಾಡಿದೆ.

ಕಾಕತಾಳೀಯವೆಂಬಂತೆ, ಈ ವರದಿಯು ಅಕ್ಟೋಬರ್ 2, 2014ರಂದು “ಜಾಗತಿಕ ಶುಚಿತ್ವವನ್ನು ಸಾಧಿಸುವ” ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ‘ಸ್ವಚ್ಛ ಭಾರತ ಮಿಷನ್’ ಯೋಜನೆಗೆ 9 ವರ್ಷ ತುಂಬಿದ ಸಂದರ್ಭದಲ್ಲಿ ಬಹಿರಂಗವಾಗಿದೆ.

ಈ ಸಮೀಕ್ಷೆಯನ್ನು ಭಾರತದ 341 ಜಿಲ್ಲೆಗಳಲ್ಲಿ ನಡೆಸಲಾಗಿದ್ದು, ಸಮೀಕ್ಷೆಯ ಪ್ರಶ್ನೆಗಳಿಗೆ ಒಟ್ಟು 39,000 ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಶೇ. 47ರಷ್ಟು ಮಂದಿ ಮೊದಲ ದರ್ಜೆಯ ಜಿಲ್ಲೆಗಳಿಗೆ ಸೇರಿದ್ದರೆ, ಶೇ. 31ರಷ್ಟು ಮಂದಿ ದ್ವಿತೀಯ ದರ್ಜೆಯ ಜಿಲ್ಲೆಗಳು ಹಾಗೂ ಶೇ. 22ರಷ್ಟು ಮಂದಿ ಮೂರು ಮತ್ತು ನಾಲ್ಕನೆ ದರ್ಜೆಯ ಜಿಲ್ಲೆಗಳಿಗೆ ಸೇರಿದ್ದಾರೆ.

“ನಿಮ್ಮ ಜಿಲ್ಲೆ/ನಗರದಲ್ಲಿ ಕಾರ್ಯಾಚರಿಸುತ್ತಿರುವ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಕಳೆದ ಮೂರು ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ಸುಧಾರಿಸಿದೆ” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ 13,000 ಮಂದಿಯ ಪೈಕಿ ಶೇ. 52ರಷ್ಟು ಮಂದಿ ಯಾವುದೇ ಸುಧಾರಣೆಯಾಗಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಶೇ. 3ರಷ್ಟು ಮಂದಿ ಮತ್ತಷ್ಟು ಹದಗೆಟ್ಟಿದೆ ಎಂದು ಉತ್ತರಿಸಿದ್ದರೆ, ಶೇ. 3ರಷ್ಟು ಮಂದಿ ಏನೂ ಹೇಳಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ. ಇನ್ನುಳಿದ ಶೇ. 42ರಷ್ಟು ಮಂದಿ ಪರಿಸ್ಥಿತಿಯು ಸುಧಾರಿಸಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯ ವರದಿ ಪ್ರಕಾರ, ಮುಂಬೈ, ದಿಲ್ಲಿ ಅಥವಾ ಬೆಂಗಳೂರಿನಂಥ ಮಹಾನಗರಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಹೋಗುವುದನ್ನು ದುಸ್ವಪ್ನ ಎಂದೇ ಪರಿಗಣಿಸಲಾಗಿದೆ. ಈ ಸಾರ್ವಜನಿಕ ಶೌಚಾಲಯಗಳನ್ನು ಸುಲಭ್ ಇಂಟರ್ ನ್ಯಾಶನಲ್ ಅಥವಾ ದಕ್ಷ ಸ್ಥಳೀಯ ಸಂಸ್ಥೆಗಳು ಅಥವಾ ಪಾವತಿಸಿ ಉಪಯೋಗಿಸುವ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದ್ದರೂ ಈ ಅಭಿಪ್ರಾಯ ಸಾಮಾನ್ಯವಾಗಿದೆ.

“ದೊಡ್ಡ ಸಮಸ್ಯೆಯೆಂದರೆ, ಲೋಕಲ್ ಸರ್ಕಲ್ಸ್ ಸಮೀಕ್ಷೆಗೆ ಪ್ರತಿಕ್ರಿಯಿಸಿರುವ ದೊಡ್ಡ ಸಂಖ್ಯೆಯ ಜನರು ತಮ್ಮ ಪ್ರದೇಶಗಳು, ಜಿಲ್ಲೆಗಳು ಅಥವಾ ನಗರಗಳಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಶೌಚಾಲಯಗಳಲ್ಲಿನ ನೈರ್ಮಲ್ಯ, ಶುಚಿತ್ವ ಹಾಗೂ ನಿರ್ವಹಣೆಯ ಕೊರತೆ ಮತ್ತಷ್ಟು ಹೆಚ್ಚಿದೆ ಎಂದು ಉತ್ತರಿಸಿದ್ದಾರೆ” ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News