ಬಿಜೆಪಿಯು ಈಡಿ, ಸಿಬಿಐ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ: ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್
ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ Photo- PTI
ರಾಂಚಿ: ಜಾರಿ ನಿರ್ದೇಶನಾಲಯ (ಈಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂತಾದ ಕೇಂದ್ರೀಯ ಸಂಸ್ಥೆಗಳ ಮೂಲಕ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊರಟಿದೆ ಎಂದು ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಶುಕ್ರವಾರ ಆರೋಪಿಸಿದ್ದಾರೆ.
ಮಹಾದೇವ್ ಆ್ಯಪ್‌ನ ಮಾಲಕರು ಬಘೇಲ್‌ಗೆ ಯುಎಇಯಿಂದ ಕ್ಯಾಶ್ ಕೊರಿಯರ್ (ಹಣ ಸಾಗಿಸುತ್ತಿರುವ ವ್ಯಕ್ತಿ)ನಲ್ಲಿ 508 ಕೋಟಿ ರೂಪಾಯಿ ಕಳುಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದ ಗಂಟೆಗಳ ಬಳಿಕ ಬಘೇಲ್ ಈ ಹೇಳಿಕೆ ನೀಡಿದ್ದಾರೆ.
ಮಹಾದೇವ್ ಆ್ಯಪ್ ಎನ್ನುವುದು ಅಕ್ರಮ ಜುಗಾರಿ ಮತ್ತು ಬೆಟ್ಟಿಂಗ್ ವೆಬ್‌ಸೈಟಾಗಿದೆ.
ಕ್ಯಾಶ್ ಕೊರಿಯರ್ ಅಸಿಮ್ ದಾಸ್‌ನನ್ನು ಬಂಧಿಸಿ ಅವನ ಕಾರು ಮತ್ತು ಅವನ ಮನೆಯಿಂದ 5.39 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ಅನುಷ್ಠಾನ ನಿರ್ದೇಶನಾಲಯ ಹೇಳಿದೆ. ಈವರೆಗೆ, ಜಾರಿ ನಿರ್ದೇಶನಾಲಯವು ನಾಲ್ವರನ್ನು ಬಂಧಿಸಿ 450 ಕೋಟಿ ರೂ. ವಶಪಡಿಸಿಕೊಂಡಿದೆ. ಅದು 14 ಮಂದಿಯ ವಿರುದ್ಧ ದೂರನ್ನೂ ದಾಖಲಿಸಿದೆ.
90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
‘‘ಭಾರತೀಯ ಜನತಾ ಪಕ್ಷವು ಈಡಿ, ಐಟಿ, ಡಿಆರ್‌ಐ ಮತ್ತು ಸಿಬಿಐ ಮುಂತಾದ ಸಂಸ್ಥೆಗಳ ನೆರವಿನಿಂದ ಛತ್ತೀಸ್‌ಗಢ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ’’ ಎಂದು ಬಘೇಲ್ ಶುಕ್ರವಾರ ಹೇಳಿದರು. ‘‘ಚುನಾವಣೆಗಿಂತ ಸ್ವಲ್ಪ ಮೊದಲು, ನನ್ನ ಪ್ರತಿಷ್ಠೆಗೆ ಕಳಂಕ ತರುವುದಕ್ಕಾಗಿ ಅತ್ಯಂತ ಕುತ್ಸಿತ ಪ್ರಯತ್ನವನ್ನು ಮಾಡಿದೆ. ಇದು ಜನಪ್ರಿಯ ಕಾಂಗ್ರೆಸ್ ಸರಕಾರದ ಹೆಸರು ಕೆಡಿಸಲು ನಡೆಸಲಾಗುತ್ತಿರುವ ರಾಜಕೀಯ ಪ್ರಯತ್ನ. ಇದನ್ನು ಈಡಿ ಮೂಲಕ ಮಾಡಲಾಗುತ್ತಿದೆ’’ ಎಂಬುದಾಗಿ ಬಘೇಲ್ ಶುಕ್ರವಾರ ಎಕ್ಸ್‌ನಲ್ಲಿ ಬರೆದಿದ್ದಾರೆ.