ಮಹಿಳಾ ಉದ್ಯೋಗಿಗಳಿಗೆ ʼಮುಟ್ಟಿನ ರಜೆʼ ಪ್ರಸ್ತಾಪಕ್ಕೆ ಸಚಿವೆ ಸ್ಮೃತಿ ಇರಾನಿ ವಿರೋಧ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ (PTI)
ಹೊಸದಿಲ್ಲಿ: ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ವೇತನ ಸಹಿತ ಮುಟ್ಟಿನ ರಜೆ ನೀಡುವ ಪ್ರಸ್ತಾಪಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಸಂಸದ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇರಾನಿ, ಮುಟ್ಟು ಮಹಿಳೆಯರ ಜೀವನದ ನೈಸರ್ಗಿಕ ಭಾಗವಾಗಿದೆ, ಅದನ್ನು ವಿಶೇಷ ರಜೆ ನಿಬಂಧನೆಗಳ ಅಗತ್ಯವಿರುವ ಅಂಗವಿಕಲತೆ ಎಂಬಂತೆ ಪರಿಗಣಿಸಬಾರದು ಎಂದು ಹೇಳಿದರು.
"ಋತುಸ್ರಾವದ ಮಹಿಳೆಯಾಗಿ, ಮುಟ್ಟು ಮತ್ತು ಋತುಚಕ್ರವು ಅಂಗವಿಕಲತೆ ಅಲ್ಲ, ಇದು ಮಹಿಳೆಯರ ಜೀವನದ ನೈಸರ್ಗಿಕ ಭಾಗವಾಗಿದೆ" ಎಂದು ಇರಾನಿ ಹೇಳಿದರು.
ಮುಟ್ಟಿನ ರಜೆಯು ಉದ್ಯೋಗಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ ಅವರು, "ಮುಟ್ಟಾಗದವರು ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಸಮಸ್ಯೆಗಳನ್ನು ನಾವು ಪ್ರಸ್ತಾಪಿಸಬಾರದು” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಮುಟ್ಟಿನ ನೈರ್ಮಲ್ಯದ ಪ್ರಾಮುಖ್ಯತೆಯನ್ನು ಅಂಗೀಕರಿಸಿದ ಇರಾನಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕರಡು ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ತಿಳಿಸಿದ್ದಾರೆ.