ನ್ಯೂಸ್ ಲಾಂಡ್ರಿ ಮಾನನಷ್ಟ ಪ್ರಕರಣ | ರಾಜಕೀಯ ವ್ಯಾಖ್ಯಾನಕಾರ ಅಭಿಜಿತ್ ಅಯ್ಯರ್-ಮಿತ್ರಗೆ ದಿಲ್ಲಿ ಹೈಕೋರ್ಟ್ ಸಮನ್ಸ್
PC : Newslaundry
ಹೊಸದಿಲ್ಲಿ: ತಮ್ಮ ವಿರುದ್ಧ ಲೈಂಗಿಕ ನಿಂದನೆಗಳನ್ನು ಮಾಡಿದ್ದಕ್ಕಾಗಿ ಡಿಜಿಟಲ್ ಸುದ್ದಿಸಂಸ್ಥೆ ನ್ಯೂಸ್ ಲಾಂಡ್ರಿಯ ಮಹಿಳಾ ಪತ್ರಕರ್ತರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ರಾಜಕೀಯ ವ್ಯಾಖ್ಯಾನಕಾರ ಅಭಿಜಿತ್ ಅಯ್ಯರ್-ಮಿತ್ರ ಅವರಿಗೆ ದಿಲ್ಲಿ ಉಚ್ಛ ನ್ಯಾಯಾಲಯವು ಸೋಮವಾರ ಸಮನ್ಸ್ ಹೊರಡಿಸಿದೆ.
ಉಚ್ಛ ನ್ಯಾಯಾಲಯದಿಂದ ಛೀಮಾರಿಯ ಬಳಿಕ ಮೇ 21ರಂದು ಅಯ್ಯರ್-ಮಿತ್ರ ಫೆಬ್ರವರಿ ಮತ್ತು ಎಪ್ರಿಲ್ ನಡುವೆ ತಾನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಹೇಳಿಕೆಗಳನ್ನು ತೆಗೆದುಹಾಕಿದ್ದರು.
ಸೋಮವಾರ ಸಂಕ್ಷಿಪ್ತವಾಗಿ ವಿಚಾರಣೆಯನ್ನು ತಡೆಹಿಡಿದ ನ್ಯಾಯಾಲಯವು ವಾದಿಗಳು ಪ್ರಕರಣವನ್ನು ಮುಂದುವರಿಸಲು ಬಯಸಿದ್ದಾರೆಯೇ ಎನ್ನುವುದನ್ನು ದೃಢಪಡಿಸುವಂತೆ ಅವರ ಪರ ವಕೀಲರಿಗೆ ಸೂಚಿಸಿತು. ವಕೀಲರು ಸಕಾರಾತ್ಮಕವಾಗಿ ಉತ್ತರಿಸಿದ ಬಳಿಕ ನ್ಯಾಯಾಲಯವು ಅಯ್ಯರ್-ಮಿತ್ರಗೆ ವಿಧ್ಯುಕ್ತವಾಗಿ ಸಮನ್ಸ್ ಹೊರಡಿಸಿತು.
ಬಿಜೆಪಿ ಪರ ಮಾಧ್ಯಮ ಒಪಿಇಂಡಿಯಾ ಅಂಕಣಕಾರ ಅಯ್ಯರ್-ಮಿತ್ರ ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸಬೇಕು ಮತ್ತು ಎರಡು ಕೋ.ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಕೋರಿ ಮಹಿಳಾ ಪತ್ರಕರ್ತರು ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಮೊಕದ್ದಮೆಯಲ್ಲಿ ನ್ಯೂಸ್ ಲಾಂಡ್ರಿ ಕೂಡ ವಾದಿಯಾಗಿದೆ.
ಸೋಮವಾರ ವಿಚಾರಣೆ ಸಂದರ್ಭದಲ್ಲಿ ಅಯ್ಯರ್-ಮಿತ್ರ ಪರ ಹಿರಿಯ ವಕೀಲ ಪರ್ಸಿವಲ್ ಬಿಲ್ಲಿಮೋರಿಯಾ ಅವರು,ತನ್ನ ಕಕ್ಷಿದಾರರು ಸದ್ರಿ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ನ್ಯೂಸ್ ಲಾಂಡ್ರಿ ಪತ್ರಕರ್ತೆಯರ ಪರ ನ್ಯಾಯವಾದಿ ಬಾನಿ ದೀಕ್ಷಿತ್ ಅವರು,ಅಯ್ಯರ-ಮಿತ್ರಗೆ ಯಾವುದೇ ಪಶ್ಚಾತ್ತಾಪವಿಲ್ಲ. ಈಗಲೂ ಅವರು ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ ಮತ್ತು ಕಾವ್ಯಾತ್ಮಕವಾಗಿ ಬರೆಯುತ್ತಿದ್ದಾರೆ ಎಂದು ವಾದಿಸಿದರು.
ಮಾನನಷ್ಟ ಪ್ರಕರಣವನ್ನು ವೆಚ್ಚಸಹಿತ ವಜಾಗೊಳಿಸುವಂತೆ ಮತ್ತು ನ್ಯೂಸ್ ಲಾಂಡ್ರಿ ಕುರಿತು ತನಿಖೆಗೆ ಬಿಲ್ಲಿಮೋರಿಯಾ ನ್ಯಾಯಾಲಯಕ್ಕೆ ಆಗ್ರಹಿಸಿದರು. ಆದರೆ ತನ್ನ ಕೈಯಲ್ಲಿರುವ ವಿಷಯವು ಅಯ್ಯರ್-ಮಿತ್ರ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದ ಉಚ್ಛ ನ್ಯಾಯಾಲಯವು, ನಿಮಗೆ ಇತರ ಯಾವುದೇ ದೂರು ಇದ್ದರೆ ಅದನ್ನು ಬೇರೆಲ್ಲಿಯಾದರೂ ಹೇಳಿಕೊಳ್ಳಿ ಎಂದು ತಿಳಿಸಿತು.
ನ್ಯೂಸ್ ಲಾಂಡ್ರಿಯನ್ನು ಟೀಕಿಸಿದ ಬಿಲ್ಲಿಮೋರಿಯಾ,ಅದು ಅತ್ಯಂತ ಕಪಟ ಸುದ್ದಿವಾಹಿನಿಗಳಲ್ಲೊಂದಾಗಿದೆ ಮತ್ತು ಅದು ಇಟಲಿಯ ಪ್ರಧಾನಿಯ ಜೊತೆಗೆ ಪ್ರಧಾನಿ ಮೋದಿಯವರ ಸಂಬಂಧದ ಬಗ್ಗೆ ಟೀಕಿಸಿತ್ತು ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು,ಲಕ್ಷ್ಮಣ ರೇಖೆ ಎಲ್ಲಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಒಂದು ಪೋಸ್ಟ್ ಮನಹಾನಿಕರವಾಗಿದ್ದಾಗ ಅವರು ನ್ಯಾಯಾಲಯದ ಮೆಟ್ಟಿಲೇರುವ ಹಕ್ಕು ಹೊಂದಿರುತ್ತಾರೆ ಎಂದು ಹೇಳಿತು.