ವಿದೇಶಿ ದೇಣಿಗೆ ಸ್ವೀಕರಿಸಿರುವ ಎನ್‌ಜಿಓಗಳಿಗೆ ಸುದ್ದಿ ಪ್ರಕಾಶನಕ್ಕೆ ಅನುಮತಿ ಇಲ್ಲ: ಕೇಂದ್ರ ನಿರ್ದೇಶನ
PC : PTI
ಹೊಸದಿಲ್ಲಿ: ಪ್ರಕಾಶನಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವ ವಿದೇಶಿ ದೇಣಿಗೆ ಪಡೆಯುವ ಸರಕಾರೇತರ ಸಂಸ್ಥೆಗಳು (ಎನ್‌ಜಿಓ) ಯಾವುದೇ ವಾರ್ತೆಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಪ್ರಕಟಿಸುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.
ವಿದೇಶಿ ದೇಣಿಗೆ ನಿಯಂತ್ರಣ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಭಾಗವಾಗಿ ನೂತನ ನಿರ್ದೇಶನವನ್ನು ನೀಡಲಾಗಿದೆ. ವಿದೇಶದಿಂದ ದೇಣಿಗೆಗಳನ್ನು ಪಡೆಯಬಯಸುವ ಲಾಭೋದ್ದೇಶ ರಹಿತ ಸಂಸ್ಥೆಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಅದು ಹೇಳಿದೆ.
ನೂತನ ತಿದ್ದುಪಡಿ ನಿಯಮಾವಳಿಗಳ ಪ್ರಕಾರ ಒಂದು ವೇಳೆ ಎನ್‌ಜಿಓ ನಡೆಸುತ್ತಿರುವ ಪ್ರಕಾಶನವು ಭಾರತದ ಸುದ್ದಿಪತ್ರಿಕೆಗಳ ರಿಜಿಸ್ಟ್ರಾರ್ ಅವರಲ್ಲಿ ನೋಂದಾಯಿತವಾಗಿದ್ದಲ್ಲಿ, ತನ್ನದು ಸುದ್ದಿಪತ್ರಿಕೆಯಲ್ಲವೆಂದು ಹೇಳುವ ಪ್ರಮಾಣಪತ್ರವನ್ನು ಪ್ರಾಧಿಕಾರದಿಂದ ಪಡೆದುಕೊಳ್ಳಬೇಕಾಗುತ್ತದೆ.
ಆರ್ಥಿಕ ಕಾರ್ಯಪಡೆ,ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಕಪ್ಪುಹಣ ಬಿಳುಪು ಕುರಿತ ಜಾಗತಿಕ ಕಾವಲುಸಂಸ್ಥೆ ಇವುಗಳ ಸದಾಚಾರ ಮಾರ್ಗದರ್ಶಿ ಸೂತ್ರಗಳನ್ನು ತಾವು ಬದ್ಧರಾಗಿದ್ದೇವೆ ಎಂಬ ಮುಚ್ಚಳಿಕೆಯನ್ನು ಕೂಡಾ ಅವರು ನೀಡಬೇಕಾಗುತ್ತದೆ.
ಇಂತಹ ಸಂಸ್ಥೆಗಳು ತಮ್ಮ ಕಳೆದ ಮೂರು ವರ್ಷಗಳ ವಿತ್ತೀಯ ಹೇಳಿಕೆಗಳು ಹಾಗೂ ಲೆಕ್ಕಪರಿಶೋಧನಾ ವರದಿಗಳ ಲಗತ್ತಿಸಿರಬೇಕಾಗುತ್ತದೆ. ಈ ದಾಖಲೆಗಳು ಆಸ್ತಿ ಹಾಗೂ ಬಾಧ್ಯತೆಗಳು,ರಶೀದಿ ಹಾಗೂ ಪಾವತಿ ಖಾತೆಗಳ ಸ್ಟೇಟ್‌ಮೆಂಟ್ ಗಳನ್ನು ಒಳಗೊಂಡಿರಬೇಕಾಗುತ್ತದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ತಮ್ಮನ್ನು ನೋಂದಾಯಿಸಿಕೊಳ್ಳುವ ಎನ್‌ಜಿಓ ಸಂಸ್ಥೆಗಳು ಕಳೆದ ಮೂರು ವರ್ಷಗಳ ತಮ್ಮ ಚಟುವಟಿಕೆಗಳನ್ನು ಸಲ್ಲಿಸುವ ಅಗತ್ಯವಿದೆ ಎಂದು ನೂತನ ತಿದ್ದುಪಡಿ ನಿಯಮಗಳಲ್ಲಿ ಸೂಚಿಸಲಾಗಿದೆ.