×
Ad

ಮಧ್ಯ ಪ್ರದೇಶ | ಮತಾಂತರ ಆರೋಪ: ಬಲಪಂಥೀಯರಿಂದ ಎನ್‌ಜಿಒ ಸದಸ್ಯರ ಮೇಲೆ ಹಲ್ಲೆ

Update: 2025-07-25 17:12 IST

Screengrab | PC : X \ @Anurag_Dwary

ಇಂದೋರ(ಮ.ಪ್ರ.): ಧಾರ್ಮಿಕ ಮತಾಂತರದ ಆರೋಪದಲ್ಲಿ ಬಲಪಂಥೀಯ ಕಾರ್ಯಕರ್ತರು ಎನ್‌ಜಿಒ ಸದಸ್ಯರನ್ನು ಥಳಿಸಿದ ಘಟನೆ ಗುರುವಾರ ಇಲ್ಲಿ ನಡೆದಿದೆ. ಇಂದೋರ್ ಪ್ರೆಸ್ ಕ್ಲಬ್‌ನ ಹೊರಗೆ ಈ ಘಟನೆ ನಡೆದಿದೆ.

ಎನ್‌ಜಿಒ ಹೌಲ್ ಗ್ರೂಪ್‌ನ ಸುಮಾರು ಎಂಟು ಸದಸ್ಯರು ಸುದ್ದಿಗೋಷ್ಠಿ ನಡೆಸಲು ಅಲ್ಲಿಗೆ ಆಗಮಿಸಿದ್ದರು. ಸ್ಥಳೀಯ ಪೋಲಿಸರು ಮಧ್ಯ ಪ್ರವೇಶಿಸಿ ಹಲ್ಲೆಯನ್ನು ತಡೆದಿದ್ದಾರೆ. ಈ ಬಗ್ಗೆ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.

ಎನ್‌ಜಿಒ ಪ್ರಕಾರ ಅದು ನೆರೆಯ ದೇವಾಸ್ ಜಿಲ್ಲೆಯ ಶುಕ್ರವಾಸ ಗ್ರಾಮದಲ್ಲಿ ಶಿಕ್ಷಣ ಮತ್ತು ಆರೋಗ್ಯದಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕೆಲವು ತಿಂಗಳುಗಳಿಂದ ತನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದು, ಆರೋಪಗಳಿಗೆ ಉತ್ತರಿಸಲು ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು ಎಂದು ಹೌಲ್ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ,ಸ್ಥಳೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ‘ಮತಾಂತರ ಜಾಲ’ವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಲಪಂಥೀಯ ಕಾರ್ಯಕರ್ತರ ಗುಂಪು ಎನ್‌ಜಿಒದ ಸ್ಥಾಪಕ ಸೌರವ ಬ್ಯಾನರ್ಜಿ ಮತ್ತು ಮಹಿಳೆಯರು ಸೇರಿದಂತೆ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದೋರಿನ ಸ್ಥಳೀಯ ವರದಿಗಳು ಹೇಳಿವೆ.

ಹಲ್ಲೆಯ ಬಳಿಕ ಎನ್‌ಜಿಒ ಸದಸ್ಯರು ಪೋಲಿಸ್ ಠಾಣೆಗೆ ತೆರಳಲು ಮುಂದಾಗ ಅವರನ್ನು ಮತ್ತೆ ಥಳಿಸಿದ ಗುಂಪು ಕೆಲವು ಸದಸ್ಯರ ಮುಖಗಳಿಗೆ ಕಪ್ಪುಬಣ್ಣವನ್ನೂ ಬಳಿದಿತ್ತು. ಘಟನೆಯ ವೀಡಿಯೊ ವೈರಲ್‌ ಆಗಿದೆ.

ಹಲ್ಲೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ,‘ಎನ್‌ಜಿಒ ವಿರುದ್ಧದ ಆರೋಪಗಳು ಸುಳ್ಳು. ಅವರು ನಾವು ಮತಾಂತರಿಸಿರುವ ಒಬ್ಬನೇ ಒಬ್ಬ ವ್ಯಕ್ತಿಯನ್ನು ಎದುರಿಗೆ ತರಲಿ’ ಎಂದು ಪ್ರತಿಪಾದಿಸಿದರು. ಬಲಪಂಥೀಯ ಗುಂಪು ಯಾವುದೇ ಪುರಾವೆಯಿಲ್ಲದೆ ತನ್ನ ತಂಡದ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದರು.

ಎನ್‌ಜಿಒದೊಂದಿಗೆ ಕೆಲಸ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳ ಪೋಷಕರು ಗುಂಪು ತಮ್ಮ ಮಕ್ಕಳನ್ನು ‘ಬ್ರೈನ್ ವಾಷ್’ ಮಾಡಿದೆ ಎಂದು ಆರೋಪಿಸಿದ್ದಾರೆಂದು ದೇವಾಸ್ ಹೆಚ್ಚುವರಿ ಎಸ್‌ಪಿ(ಗ್ರಾಮೀಣ) ಹರನಾರಾಯಣ ಬಾಥಮ್ ಹೇಳಿದರು.

‘ಪೋಲಿಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಷಯವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ನಾವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ’ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News