ಇನ್ಮುಂದೆ ಟೋಲ್ ಪ್ಲಾಝಾ ವ್ಯವಸ್ಥಾಪಕರು ಬಾಡಿ ಕ್ಯಾಮೆರಾ ಧರಿಸಬೇಕು !
Photo: PTI
ಹೊಸದಿಲ್ಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಪ್ರಮಾಣೀಕೃತ ಕಾರ್ಯನಿರ್ವಹಣಾ ನಿಯಮಾವಳಿಗಳನ್ನು ಜಾರಿಗೊಳಿಸಿದ್ದು, ಇದರನ್ವಯ ನಿಯಮಬಾಹಿರವಾಗಿ ಸಂಚರಿಸುವ ಸವಾರರೊಂದಿಗೆ ವ್ಯವಹರಿಸುವಾಗ ಟೋಲ್ ಪ್ಲಾಝಾ ವ್ಯವಸ್ಥಾಪಕರು ಹಾಗೂ ಮೇಲ್ವಿಚಾರಕರು ಬಾಡಿ ಕ್ಯಾಮೆರಾಗಳನ್ನು ಧರಿಸಬೇಕಿದೆ. ಇದರಿಂದ, ಇಂತಹ ಘಟನೆಗಳ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಬಹುದಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು, ವಾಹನ ಸವಾರರು ಹಾಗೂ ಟೋಲ್ ಪ್ಲಾಝಾ ನಿರ್ವಾಹಕರ ಹಿತಾಸಕ್ತಿಯನ್ನು ರಕ್ಷಿಸಲು, ಮಾತಿನ ಚಕಮಕಿಯನ್ನು ತಪ್ಪಿಸಲು ಹಾಗೂ ಟೋಲ್ ಫ್ಲಾಜಾಗಳ ಬಳಿಯಲ್ಲಿನ ಭದ್ರತೆಯನ್ನು ಬಿಗಿಗೊಳಿಸಲು ಪ್ರಮಾಣೀಕೃತ ಕಾರ್ಯನಿರ್ವಹಣಾ ನಿಯಮಾವಳಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.
ಅಧಿಕೃತ ಪತ್ರಿಕಾ ಪ್ರಕಟಣೆಯೊಂದರ ಪ್ರಕಾರ, ಎನ್ಎಚ್ಎಐ ಕ್ಷೇತ್ರಕಾರ್ಯ ಅಧಿಕಾರಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಾತ್ರಿಗೊಳಿಸಲು ಹಾಗೂ ರಸ್ತೆ ಸುಂಕ ವಸೂಲಿ ಮಾಡುವ ಸಂಸ್ಥೆಗಳು ಅಗತ್ಯ ಸಿಬ್ಬಂದಿಗಳ ನಿರ್ವಹಣೆ ಮಾಡುವ ನಿಯಮಗಳಿಗೆ ಬದ್ಧವಾಗಿರುವಂತೆ ಹಾಗೂ ರಸ್ತೆ ಬಳಕೆದಾರರು ನಿಯಮಗಳನ್ನು ಪಾಲಿಸುವಂತೆ ಮಾಡುವ ಮಾರ್ಗಸೂಚಿಗಳು ವಿವರವಾದ ಪ್ರಮಾಣೀಕೃತ ಕಾರ್ಯನಿರ್ವಹಣಾ ನಿಯಮಾವಳಿಗಳಲ್ಲಿ ಸೇರಿವೆ.
ಪ್ರಮಾಣೀಕೃತ ಕಾರ್ಯನಿರ್ವಹಣಾ ನಿಯಮಾವಳಿಗಳ ಪ್ರಕಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಧಿಕಾರಿಗಳು ಮಾರ್ಗಸೂಚಿಗಳನ್ವಯ ರಸ್ತೆ ಸುಂಕ ವಸೂಲಾತಿ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ.
“ಯಾವುದೇ ಬಗೆಯ ನಿರೀಕ್ಷಿತ ಹಿಂಸಾಚಾರದ ಘಟನೆಗಳು ಹಾಗೂ ಟೋಲ್ ಪ್ಲಾಝಾಗಳ ಬಳಿ ನಡೆಯುವ ಹಿಂಸಾಚಾರದ ಘಟನೆಗಳನ್ನು ಬಾಡಿ ಕ್ಯಾಮೆರಾ ಧರಿಸಿರುವ ಟೋಲ್ ಪ್ಲಾಝಾ ವ್ಯವಸ್ಥಾಪಕರು/ಪಥಗಳ ಮೇಲ್ವಿಚಾರಕರು ಮಾತ್ರ ನಿರ್ವಹಿಸಬೇಕು” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಒಂದು ವೇಳೆ ರಸ್ತೆ ಬಳಕೆದಾರರು ಕಾನೂನುಬಾಹಿರವಾಗಿ ವರ್ತಿಸಿದರೆ, ಪಥಗಳ ಮೇಲ್ವಿಚಾರಕರು ಮಧ್ಯಪ್ರವೇಶಿಸಿ, ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಯಾವುದೇ ಸಂದರ್ಭಗಳಲ್ಲೂ ಟೋಲ್ ಪ್ಲಾಝಾ ಸಿಬ್ಬಂದಿಗಳು ಪ್ರಚೋದನಾಕಾರಿ ಭಾಷೆಯನ್ನು ಬಳಸಬಾರದು ಅಥವಾ ಹಿಂಸಾಚಾರಕ್ಕೆ ಮುಂದಾಗಬಾರದು. ಒಂದು ವೇಳೆ ಸಮಸ್ಯೆಯೇನಾದರೂ ಮುಂದುವರಿದರೆ ಅಥವಾ ವಿಷಮಿಸಿದರೆ ಟೋಲ್ ಫ್ಲಾಝಾ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವು ಪಡೆದು ಎಫ್ ಐ ಆರ್ ದಾಖಲಿಸಬೇಕು. ಅಂತಹ ಘಟನೆಗಳ ಸಾಕ್ಷಿಯನ್ನು ಒದಗಿಸಲು ಪ್ಲಾಝಾ ಸಿಬ್ಬಂದಿಗಳು ವಿಡಿಯೊ ಚಿತ್ರೀಕರಣ ಮಾಡಬಹುದಾಗಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು “ಸುಂಕ ವಸೂಲಾತಿಯಲ್ಲಿ ಶಾಂತಚಿತ್ತತೆ” ಎಂಬ ನೂತನ ಕ್ರಮವನ್ನು ಪ್ರಕಟಿಸಿದ್ದು, ಇದರಡಿ ಟೋಲ್ ಪ್ಲಾಝಾ ಸಿಬ್ಬಂದಿಗಳಿಗೆ ವೃತ್ತಿಪರ ಮಾನಸಿಕ ತಜ್ಞರ ಸಹಯೋಗದೊಂದಿಗೆ ಸಿಟ್ಟು ಶಮನ ತರಬೇತಿಯನ್ನು ನೀಡಲು ಮುಂದಾಗಿದೆ.
“ಈ ಉಪಕ್ರಮದಡಿ ಪ್ರಥಮ ತರಬೇತಿ ಶಿಬಿರವನ್ನು ಹರ್ಯಾಣದ ಮುರ್ತಾಲ್ ಟೋಲ್ ಪ್ಲಾಝಾ ಬಳಿ ಹಮ್ಮಿಕೊಳ್ಳಲಾಗಿತ್ತು ಹಾಗೂ ಇಂತಹ ಮತ್ತಷ್ಟು ತರಬೇತಿಯನ್ನು ದೇಶಾದ್ಯಂತ ಇನ್ನಿತರ ಟೋಲ್ ಪ್ಲಾಝಾಗಳಲ್ಲೂ ಹಮ್ಮಿಕೊಳ್ಳಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಸ್ತೆ ಬಳಕೆದಾರನು ಹಿಂಸಾಚಾರದಲ್ಲಿ ಭಾಗಿಯಾಗಿರುವ ಯಾವುದೇ ಘಟನೆ ಅಥವಾ ಟೋಲ್ ಪ್ಲಾಝಾ ಬಳಿಯಲ್ಲಿನ ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡುವ ಘಟನೆಯನ್ನು ಸುಂಕ ವಸೂಲಾತಿ ಸಂಸ್ಥೆಗಳು ಅಗತ್ಯ ದಾಖಲೆಗಳು/ಸಾಕ್ಷ್ಯಗಳೊಂದಿಗೆ ಪೊಲೀಸರು ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಯೋಜನಾ ಜಾರಿ ಘಟಕಕ್ಕೆ ವರದಿ ಮಾಡಬೇಕು ಎಂದು ಹೇಳಲಾಗಿದೆ.
ಟೋಲ್ ಪ್ಲಾಝಾಗೆ ನಿಯೋಜನೆಗೊಂಡಿರುವ ಪ್ರತಿ ಸಿಬ್ಬಂದಿಯ ಪೊಲೀಸ್ ಪರಿಶೀಲನೆಯನ್ನು ಸುಂಕ ವಸೂಲಾತಿ ಸಂಸ್ಥೆಗಳು ಪೂರೈಸಿರುವುದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಕ್ಷೇತ್ರಕಾರ್ಯ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ಇದರೊಂದಿಗೆ ಸುಂಕ ವಸೂಲಾತಿ ಸಂಸ್ಥೆಗಳು ರಸ್ತೆ ಬಳಕೆದಾರರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಟೋಲ್ ಪ್ಲಾಝಾ ಸಿಬ್ಬಂದಿಗಳಿಗೆ ಸೂಚಿಸಬೇಕು ಎಂದೂ ಪ್ರಕಟಣೆಯಲ್ಲಿ ನಿರ್ದೇಶಿಸಲಾಗಿದೆ.
ಸುಂಕ ವಸೂಲಾತಿ ಸಂಸ್ಥೆಗಳು ಘಟನೆಗಳು/ಎಫ್ ಐ ಆರ್ ಗಳ ತನಿಖೆ ಸಂಬಂಧಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಯೋಜನಾ ಜಾರಿ ಘಟಕಕ್ಕೆ ಸಲ್ಲಿಸಬೇಕು. ಇದರಿಂದ, ಇಂತಹ ಪ್ರಕರಣಗಳ ಕುರಿತು ಒಂದು ವೇಳೆ ಕ್ರಮ ಜಾರಿಯಾಗಿರದಿದ್ದರೆ, ಈ ಕುರಿತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಕ್ಷೇತ್ರಕಾರ್ಯ ಅಧಿಕಾರಿಗಳು ವರದಿ ಮಾಡಬಹುದಾಗಿದೆ.
ಪ್ರಕಟಿಸಲಾಗಿರುವ ಪ್ರಮಾಣೀಕೃತ ಕಾರ್ಯನಿರ್ವಹಣಾ ನಿಯಮಾವಳಿಗಳಿಂದ ರಸ್ತೆ ಬಳಕೆದಾರರು ಹಾಗೂ ಟೋಲ್ ಪ್ಲಾಝಾ ಸಿಬ್ಬಂದಿಗಳ ನಡುವಿನ ಚಕಮಕಿಯ ನಿದರ್ಶನಗಳು ತಗ್ಗಲಿದ್ದು, ಇದರಿಂದ ಹೆದ್ದಾರಿ ಬಳಕೆದಾರರು ಹಾಗೂ ಟೋಲ್ ಪ್ಲಾಝಾ ಅಧಿಕಾರಿಗಳಿಬ್ಬರೂ ತಮ್ಮ ದೈನಂದಿನ ಕಾರ್ಯಾಚರಣೆಯನ್ನು ಸುಗಮವಾಗಿ ನಡೆಸಲು ಸಾಧ್ಯವಾಗಲಿದೆ.