×
Ad

ಬಿಜೆಪಿ ಅಧ್ಯಕ್ಷ ಹುದ್ದೆ | ಪ್ರಮುಖ ನಾಯಕರೊಂದಿಗೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಮಹಿಳೆಯರೂ ರೇಸ್‌ ನಲ್ಲಿ

Update: 2025-07-07 20:46 IST

ನಿರ್ಮಲಾ ಸೀತಾರಾಮನ್ | PTI  

ಹೊಸದಿಲ್ಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಕುರಿತು ಹೆಚ್ಚುತ್ತಿರುವ ಊಹಾಪೋಹಗಳ ನಡುವೆ ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಜೋಶಿ ಅವರಂತಹ ಪ್ರಮುಖ ನಾಯಕರ ಜೊತೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಮಹಿಳೆಯರ ಹೆಸರುಗಳೂ ದಿಢೀರ್ ಮುನ್ನೆಲೆಗೆ ಬಂದಿವೆ.

ಬಿಜೆಪಿಯ ಹಲವಾರು ಹಿರಿಯ ನಾಯಕರು ಈ ಮೂವರು ಮಹಿಳೆಯರ ಪೈಕಿ ಓರ್ವರು ಪಕ್ಷದ ಉನ್ನತ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಯನ್ನು ದೃಢವಾಗಿ ಬೆಂಬಲಿಸಿಲ್ಲವಾದರೂ ಪ್ರಸ್ತುತ ಈ ಹುದ್ದೆಗೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಆಂಧ್ರಪ್ರದೇಶ ಬಿಜೆಪಿಯ ಮಾಜಿ ಅಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಮತ್ತು ನಿರ್ಮಲಾ ಸೀತಾರಾಮನ್ ಅವರೂ ಸೇರಿದ್ದಾರೆ.

ಪುರಂದೇಶ್ವರಿ ಅವರು ಕಾಂಗ್ರೆಸ್‌ ನಿಂದ ಪಕ್ಷಾಂತರಗೊಂಡ ಬಳಿಕ ಬಿಜೆಪಿಯಲ್ಲಿ ಇನ್ನೂ 15 ವರ್ಷಗಳನ್ನು ಪೂರ್ಣಗೊಳಿಸಿಲ್ಲ. ಹೀಗಾಗಿ ಅವರು ಅಧ್ಯಕ್ಷ ಹುದ್ದೆಗೆ ಅರ್ಹರಾಗದಿರಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಬಿಜೆಪಿಯ ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಕನಿಷ್ಠ 15 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯರಾಗಿರುವುದು ಕಡ್ಡಾಯವಾಗಿದೆ. ಆದಾಗ್ಯೂ ಪಕ್ಷವು ಪುರಂದೇಶ್ವರಿಯವರಿಗೆ ಈ ನಿಬಂಧನೆಯಿಂದ ವಿನಾಯಿತಿ ನೀಡಬಹುದು.

ಮಹಿಳಾ ಮೋರ್ಚಾ ದೇಶಾದ್ಯಂತ ನಡೆಸಿರುವ ಹಲವಾರು ಕಾರ್ಯಕ್ರಮಗಳಿಂದಾಗಿ ವ್ಯಾಪಕವಾಗಿ ಗುರುತಿಸಿಲ್ಪಟ್ಟಿರುವ ವನತಿ ಶ್ರೀನಿವಾಸನ್ ಅವರಿಗೆ ಹಿಂದಿ ಭಾಷೆಯ ಮೇಲೆ ಸಾಕಷ್ಟು ಹಿಡಿತವಿಲ್ಲದಿರುವುದು ಪ್ರಮುಖ ಕೊರತೆಯಾಗಿದೆ. ಅಧ್ಯಕ್ಷ ಹುದ್ದೆಗೆ ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಅಗತ್ಯವಾಗಿದೆ. ಆದರೆ ಅವರು ಆಯ್ಕೆಯಾದರೆ ಅದು ದೊಡ್ಡ ಅಚ್ಚರಿಯಾಗಲಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆ, ಬಿಜೆಪಿಯು ಆರೆಸ್ಸೆಸ್ ನಿರ್ಧಾರಕ್ಕೆ ಬದ್ಧವಾಗಿ ಉನ್ನತ ಹುದ್ದೆಗೆ ಮಹಿಳೆಯನ್ನು ಬಯಸುತ್ತಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಡಾ.ಸುಧಾ ಯಾದವ ಅವರ ಹೆಸರು ಬಹಳ ಹಿಂದಿನಿಂದಲೂ ಪರಿಗಣನೆಯಲ್ಲಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಮತ್ತು ಅದರ ಸಂಸದೀಯ ಮಂಡಳಿಯ ಸದಸ್ಯೆಯಾಗಿರುವ ಯಾದವ ಆರೆಸ್ಸೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ಬೆಂಬಲವನ್ನೂ ಹೊಂದಿದ್ದಾರೆ.

ಅವರು ಉತ್ತಮ ವಾಗ್ಮಿಯಾಗಿದ್ದಾರೆ,ಸಂಘ ಮತ್ತು ಬಿಜೆಪಿಯ ಹಿರಿಯ ನಾಯಕರ ನಂಬಿಕೆಯನ್ನೂ ಗಳಿಸಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಮತ್ತು ಉತ್ತರ ಪ್ರದೇಶದಲ್ಲಿ ಎಸ್‌ಪಿ ಬಲವಾಗಿ ನೆಚ್ಚಿಕೊಂಡಿರುವ ಯಾದವ ವೋಟ್‌ ಬ್ಯಾಂಕನ್ನು ಅವರು ಸೆಳೆಯಬಲ್ಲರು.ಹೀಗಾಗಿ ಉನ್ನತ ಹುದ್ದೆಗೆ ಅವರು ಆಯ್ಕೆಯಾದರೆ ಅಚ್ಚರಿಯೇನಿಲ್ಲ ಎಂದು ಹಿರಿಯ ಬಿಜೆಪಿ ನಾಯಕರೋರ್ವರು ತಿಳಿಸಿದರು.

ಬಿಜೆಪಿಯು ಜು.10 ಮತ್ತು 18ರ ನಡುವೆ ತನ್ನ ನೂತನ ಸಾರಥಿಯನ್ನು ಘೋಷಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News