ನಿಥಾರಿ ಹತ್ಯೆ ಪ್ರಕರಣ | ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದ ನಂತರ ಸುರೇಂದ್ರ ಕೋಲಿ ಜೈಲಿನಿಂದ ಬಿಡುಗಡೆ
ಸುರೇಂದ್ರ ಕೋಲಿ (File Photo: PTI)
ಹೊಸದಿಲ್ಲಿ: 2006ರ ನಿಥಾರಿ ಸರಣಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಕೋಲಿಯನ್ನು, ಸುಪ್ರೀಂ ಕೋರ್ಟ್ ಕೊನೆಯ ಬಾಕಿ ಇರುವ ಪ್ರಕರಣದಲ್ಲೂ ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ, ಗ್ರೇಟರ್ ನೋಯ್ಡಾದ ಲುಕ್ಸರ್ ಜಿಲ್ಲಾ ಜೈಲಿನಿಂದ ಬುಧವಾರ ಸಂಜೆ ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಜೈಲು ಅಧೀಕ್ಷಕ ಬ್ರಿಜೇಶ್ ಕುಮಾರ್ ಅವರು, “ಸುಪ್ರೀಂ ಕೋರ್ಟ್ ಆದೇಶದಂತೆ ಸಂಜೆ 7.20ರ ವೇಳೆಗೆ ಸುರೇಂದ್ರ ಕೋಲಿಯನ್ನು ಬಿಡುಗಡೆ ಮಾಡಲಾಗಿದೆ,” ಎಂದು ದೃಢಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬಿಡುಗಡೆಯಾಗುವ ವೇಳೆ ನೀಲಿ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಜಾಕೆಟ್ ಧರಿಸಿದ್ದ ಕೋಲಿ ತನ್ನ ವಕೀಲರೊಂದಿಗೆ ಜೈಲಿನಿಂದ ಹೊರಬಂದಿದ್ದಾನೆ. ಹೊರಗೆ ನೆರೆದಿದ್ದ ಮಾಧ್ಯಮಗಳೊಂದಿಗೆ ಮಾತನಾಡಲು ಆತ ನಿರಾಕರಿಸಿದ ಎಂದು ತಿಳಿದು ಬಂದಿದೆ. ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಹಾಜರಿರಲಿಲ್ಲ. ಬಿಡುಗಡೆಗೊಂಡ ನಂತರ ಸುರೇಂದ್ರ ಕೋಲಿಯನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ.
2006ರಲ್ಲಿ ನೋಯ್ಡಾ ಸೆಕ್ಟರ್–31ರ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಅವರ ಬಂಗಲೆಯ ಹಿತ್ತಲಿನಲ್ಲಿ ಹಾಗೂ ಸಮೀಪದ ಚರಂಡಿಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಅಸ್ಥಿಪಂಜರ ಅವಶೇಷಗಳು ಪತ್ತೆಯಾದ ಬಳಿಕ ನಿಥಾರಿ ಪ್ರಕರಣ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಕರಣದ ಇನ್ನೊಬ್ಬ ಆರೋಪಿಯಾಗಿದ್ದ ಪಂಧೇರ್ ಕೂಡ ಹಲವು ವರ್ಷಗಳ ಕಾಲ ಜೈಲಿನಲ್ಲಿಯೇ ಇದ್ದು, 2023ರ ಅಕ್ಟೋಬರ್ 20ರಂದು ಹೈಕೋರ್ಟ್ ಖುಲಾಸೆಗೊಳಿಸಿದ ನಂತರ ಬಿಡುಗಡೆಯಾಗಿದ್ದನು.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಮೂರು ಮಂದಿ ನ್ಯಾಯಾಧೀಶರಿದ್ದ ಪೀಠವು 15 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅಪರಾಧವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು, ಸುರೇಂದ್ರ ಕೋಲಿಯನ್ನು ಖುಲಾಸೆಗೊಳಿಸಿತು. “ಕ್ರಿಮಿನಲ್ ಕಾನೂನು ಊಹೆ ಅಥವಾ ಅನುಮಾನದ ಆಧಾರದಲ್ಲಿ ಶಿಕ್ಷೆ ವಿಧಿಸಲು ಅವಕಾಶ ನೀಡುವುದಿಲ್ಲ. ಅನುಮಾನವು ಸಾಕ್ಷ್ಯಕ್ಕೆ ಪರ್ಯಾಯವಾಗುವುದಿಲ್ಲ,” ಎಂದು ಸ್ಪಷ್ಟಪಡಿಸಿದೆ.
ಪೀಠವು ತನಿಖೆಯಲ್ಲಿನ ಗಂಭೀರ ಲೋಪಗಳನ್ನು ಉಲ್ಲೇಖಿಸಿದೆ. ಅಪರಾಧ ಸ್ಥಳವನ್ನು ಸರಿಯಾಗಿ ಸುರಕ್ಷತೆಗೊಳಿಸದಿರುವುದು, ಫೊರೆನ್ಸಿಕ್ ಸಾಕ್ಷಿಗಳ ನಿರ್ಲಕ್ಷ್ಯ, ಮಹತ್ವದ ಸುಳಿವುಗಳನ್ನು ವಿಳಂಬವಾಗಿ ಬಹಿರಂಗಪಡಿಸುವುದು ಮತ್ತು ಅಂಗಾಂಗ ವ್ಯಾಪಾರದ ಸಾಧ್ಯತೆಯನ್ನು ಸರಿಯಾಗಿ ಪರಿಶೀಲಿಸದಿರುವುದರಿಂದ ತನಿಖಾ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಾಗಿದೆ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
2006ರಲ್ಲಿ ಬಂಧಿಸಿದಾಗ ಸುರೇಂದ್ರ ಕೋಲಿ 30 ವರ್ಷದವನಾಗಿದ್ದನು. ಈ ಪ್ರಕರಣಗಳಲ್ಲಿ ಆತನಿಗೆ ಮರಣದಂಡನೆಯನ್ನೂ ವಿಧಿಸಲಾಗಿತ್ತು. ಆದರೆ 2015ರಲ್ಲಿ ಅಲಹಾಬಾದ್ ಹೈಕೋರ್ಟ್, ಕ್ಷಮಾದಾನ ಅರ್ಜಿ ನಿರ್ಧಾರದಲ್ಲಿ ವಿಳಂಬ ಉಲ್ಲೇಖಿಸಿ, ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.