×
Ad

ಮಹಿಳೆಯ ವೋಟರ್ ಐಡಿಯಲ್ಲಿ ನಿತೀಶ್‌ ಕುಮಾರ್‌ ಚಿತ್ರ! ಉತ್ತರಿಸುವಂತೆ ಚುನಾವಣಾ ಆಯೋಗಕ್ಕೆ ಟಿಎಂಸಿ ಆಗ್ರಹ

Update: 2025-07-10 20:31 IST

PC :bhaskarenglish.in

ಪಾಟ್ನಾ: ಬಿಹಾರದ ಮಾಧೇಪುರ ಜಿಲ್ಲೆಯ ಮಹಿಳೆಯೋರ್ವರಿಗೆ ವಿತರಿಸಲಾದ ಮತದಾರರ ಗುರುತಿನ ಚೀಟಿಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಚಿತ್ರವಿರುವುದು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ ನಲ್ಲಿ ಇದನ್ನು ಉಲ್ಲೇಖಿಸಿರುವ ಟಿಎಂಸಿ, ಇದೊಂದು ಆಘಾತಕಾರಿ ಮತ್ತು ನಾಚಿಕೆಗೇಡಿನ ತಪ್ಪು ಎಂದು ಬಣ್ಣಿಸಿದೆ. ಈ ಬಗ್ಗೆ ಚುನಾವಣಾ ಆಯೋಗವು ಮೌನವಾಗಿದೆ ಮತ್ತು ನಿಷ್ಕ್ರಿಯವಾಗಿದೆ ಎಂದು ಅದು ಆರೋಪಿಸಿದೆ.

ಸರಣಿ ಪ್ರಶ್ನೆಗಳನ್ನೆತ್ತಿರುವ ಅದು, ‘ಇಂತಹ ವಿಲಕ್ಷಣ,ತಪ್ಪು ಮತದಾರರ ಕುರಿತು ಚೀಟಿಗಳು ಹಲವು ರಾಜ್ಯಗಳಿಂದ ವರದಿಯಾಗುತ್ತಿವೆ. ಚುನಾವಣಾ ಆಯೋಗ ಏನು ಮಾಡುತ್ತಿದೆ? ಏನೂ ಇಲ್ಲ. ನಮಗೆ ಉತ್ತರಗಳು ಬೇಕು. ಇದು ಗಂಭೀರ ಆಡಳಿತಾತ್ಮಕ ತಪ್ಪು. ಆಯೋಗದ ಕಣ್ಗಾವಲಿನಲ್ಲಿ ಇಂತಹ ಗಂಭೀರ ತಪ್ಪುಗಳು ಹೇಗೆ ನಡೆಯುತ್ತಿವೆ? ’ಎಂದು ಹೇಳಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ಮತದಾನದ ಹಕ್ಕು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಆಯೋಗದ ಹೊಣೆಗಾರಿಕೆಯಾಗಿದೆ ಎಂದು ನೆನಪಿಸಿದೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸಿ ಮಾಧೇಪುರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ. ಚಂದನ ಕುಮಾರ್‌ ಎನ್ನುವವರು ತನ್ನ ಪತ್ನಿ ಅಭಿಲಾಷಾ ಕುಮಾರಿಯ ಮತದಾರರ ಗುರುತಿನ ಚೀಟಿಯನ್ನು ಮಾಧ್ಯಮಗಳಿಗೆ ತೋರಿಸಿದ್ದು, ಅದರಲ್ಲಿ ನಿತೀಶ್‌ ಕುಮಾರ್‌ ಚಿತ್ರವಿತ್ತು. ‘ಸಾಮಾನ್ಯ ವ್ಯಕ್ತಿಯ ಚಿತ್ರವಾಗಿದ್ದರೆ ತಪ್ಪನ್ನು ನಾನು ಅರ್ಥ ಮಾಡಿಕೊಳ್ಳುತ್ತಿದ್ದೆ. ಆದರೆ ಮುಖ್ಯಮಂತ್ರಿಗಳ ಚಿತ್ರ ನನ್ನ ಪತ್ನಿಯ ಗುರುತಿನ ಚೀಟಿಯಲ್ಲಿರುವುದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ ಕುಮಾರ್‌, ಇದು ಚುನಾವಣಾ ವ್ಯಸ್ಥೆಯಲ್ಲಿನ ಪ್ರಮುಖ ದೋಷ ಎಂದು ಬಣ್ಣಿಸಿದರು.

ಸ್ಥಳೀಯ ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ)ಯನ್ನು ಸಂಪರ್ಕಿಸಿದಾಗ ಈ ವಿಷಯವನ್ನು ಯಾರಿಗೂ ಬಹಿರಂಗಗೊಳಿಸದಂತೆ ಅವರು ತನಗೆ ಸೂಚಿಸಿದ್ದರು ಎಂದು ಕಮಾರ್ ಹೇಳಿದರು.

►ಚುನಾವಣಾಧಿಕಾರಿಯ ಸಮಜಾಯಿಷಿ

ಬಿಹಾರದ ಮತದಾರರ ಗುರುತಿನ ಚೀಟಿಗಳು ಕರ್ನಾಟಕದಲ್ಲಿ ಮುದ್ರಣಗೊಳ್ಳುತ್ತವೆ ಎಂದು ಹೇಳಿದ ಉಪ ಚುನಾವಣಾಧಿಕಾರಿ ಜಿತೇಂದ್ರ ಕುಮಾರ್‌,ನಮೂನೆ 8ನ್ನು ಆನ್‌ ಲೈನ್‌ ನಲ್ಲಿ ಅಥವಾ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸುವ ಮೂಲಕ ಈ ದೋಷವನ್ನು ಸರಿಪಡಿಸಬಹುದು ಎಂದು ತಿಳಿಸಿದರು.

ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಸಂಬಂಧಿತ ಬಿ ಎಲ್‌ ಒ ಅನ್ನು ಕರ್ತವ್ಯದಿಂದ ತೆಗೆಯಲಾಗಿದೆ ಮತ್ತು ವಿವರಣೆಯನ್ನು ಕೇಳಲಾಗಿದೆ ಎಂದು ಜಿಲ್ಲಾಧಿಕಾರಿ ತರನಜೋತ್ ಸಿಂಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News