ಬಿಹಾರ ಚುನಾವಣೆಯ ಬಳಿಕ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ: ಚಿರಾಗ್ ಪಾಸ್ವಾನ್
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ (Photo: PTI)
ಹೊಸದಿಲ್ಲಿ: ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ನಂತರ, ನಿತೀಶ್ ಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸೋಮವಾರ LJP (ರಾಮ್ ವಿಲಾಸ್ ಬಣ) ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ.
ನಾವು ಕ್ರಿಮಿನಲ್ ಗಳೆದುರು ಶರಣಾಗತರಾಗಿದ್ದೇವೆ ಎಂದು ನಿತೀಶ್ ಸರಕಾರಕ್ಕೆ ಬೆಂಬಲ ನೀಡಿರುವುದರ ಕುರಿತು ವಿಷಾದ ವ್ಯಕ್ತಪಡಿಸಿದ ಕೇವಲ ಎರಡು ದಿನಗಳ ಅಂತರದಲ್ಲಿ ಚಿರಾಗ್ ಪಾಸ್ವಾನ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಲು ವಿರೋಧ ಪಕ್ಷಗಳು ಸೇನೆಯನ್ನು ಗುರಿಯಾಗಿಸಿಕೊಂಡಿವೆ” ಎಂದು ಆರೋಪಿಸಿದ್ದಾರೆ.
ಬಿಹಾರದ ಹಾಜಿಪುರ್ ಸಂಸದ ಹಾಗೂ ಕೇಂದ್ರ ಆಹಾರ ಸಂಸ್ಕರಣೆ ಸಚಿವರೂ ಆದ ಚಿರಾಗ್ ಪಾಸ್ವಾನ್, “ಎನ್ಡಿಎ ಮೈತ್ರಿಕೂಟವು ಗೆಲುವಿನ ಸಂಯೋಜನೆ ಹೊಂದಿದೆ ಎಂದು ಪ್ರತಿಪಾದಿಸಿದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಕುರಿತ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ.
“ಪ್ರಧಾನಿ ಬಗೆಗಿನ ನನ್ನ ನಿಷ್ಠೆ ಮತ್ತು ಪ್ರೀತಿಯನ್ನು ಹಲವಾರು ಬಾರಿ ಪುನರುಚ್ಚರಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಹಾರ ಚುನಾವಣೆಯನ್ನು ಎದುರಿಸಲಾಗುವುದು. ಚುನಾವಣಾ ಫಲಿತಾಂಶದ ನಂತರ, ನಿತೀಶ್ ಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಖಂಡಿತವಾಗಿಯೂ ಅವರು ಮುಖ್ಯಮಂತ್ರಿಯಾಗಲಿದ್ದಾರೆ” ಎಂದು ಅವರು ಹೇಳಿದ್ದಾರೆ.