ಉತ್ತರ ಪ್ರದೇಶ | ವಿದ್ಯುತ್ ಕಂಬ ತೆರವಿಗೆ ಹಣದ ಕೊರತೆ ಎಂದ ಅಧಿಕಾರಿಗಳು: ಜೇಬಿನಿಂದ ಹಣ ತೆಗೆದು ನೀಡಿ ಕೆಲಸ ಮಾಡಿ ಎಂದ ಶಾಸಕ
Photo credit: indiatoday.in
ಸಹರಾನ್‌ಪುರ: ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ರೈವಾಲಾ ಬಜಾರ್‌ನಲ್ಲಿ ರಸ್ತೆಯ ಮಧ್ಯದಲ್ಲಿ ನಿಂತಿರುವ ಎರಡು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಬಜೆಟ್ ಇಲ್ಲ ಎಂದ ಅಧಿಕಾರಿಗಳಿಗೆ ಉತ್ತರ ಪದೇಶದ ಶಾಸಕರೊಬ್ಬರು ಜೇಬಿನಿಂದ ಹಣ ತೆಗೆದು ನೀಡಿದ ಘಟನೆ ನಡೆದಿದೆ.
ರಸ್ತೆಯ ಮಧ್ಯದಲ್ಲಿ ಎರಡು ವಿದ್ಯುತ್ ಕಂಬಗಳಿದ್ದುದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಹಾಗೆಯೇ ಉಳಿದುಕೊಂಡಿತ್ತು. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿತ್ತು.
ಸಹರಾನ್‌ಪುರ ಕ್ಷೇತ್ರದ ಶಾಸಕ ರಾಜೀವ್ ಗುಂಬರ್, ಈ ಸಮಸ್ಯೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿ, ವಿದ್ಯುತ್ ಕಂಬಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಜೆಟ್ ಇಲ್ಲದ ಕಾರಣ ಈವರೆಗೆ ಕಂಬಗಳನ್ನು ತೆಗೆದುಹಾಕಲಾಗಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದಾಗ ಶಾಸಕ ಗುಂಬರ್ ಆಕ್ರೋಶ ವ್ಯಕ್ತಪಡಿಸಿದರು.
"ಸಾರ್ವಜನಿಕ ಹಿತಕ್ಕಾಗಿ ಬೇಕಾದರೆ ನಾನು ಹಣ ಪಾವತಿಸುತ್ತೇನೆ. ಈಗ ತಕ್ಷಣ ಕೆಲಸ ಪ್ರಾರಂಭಿಸಿ" ಎಂದು ಅವರು ತಮ್ಮ ಜೇಬಿನಿಂದ 50 ಸಾವಿರ ರೂ. ಗಳನ್ನು ತೆಗೆದು ಅಧಿಕಾರಿಗಳಿಗೆ ನೀಡಿದರು.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕರ ತಕ್ಷಣದ ಕ್ರಮವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
ಶಾಸಕರು ಸಭೆಯಲ್ಲಿ ಇನ್ನೂ ಹಲವಾರು ಸಮಸ್ಯೆಗಳನ್ನು ಉಲ್ಲೇಖಿಸಿದರು. ಶಕುಂಭರಿ ವಿಹಾರ್ ಪ್ರದೇಶಕ್ಕೆ ಇನ್ನೂ ಗ್ರಾಮೀಣ ಫೀಡರ್ ಮೂಲಕ ವಿದ್ಯುತ್ ಸರಬರಾಜು ನಡೆಯುತ್ತಿದೆ ಎಂಬ ವಿಷಯವನ್ನು ಅವರು ಸಭೆಯ ಗಮನಕ್ಕೆ ತಂದರು. "ಈ ಪ್ರದೇಶವು ನಗರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದರೆ ಇನ್ನೂ ಗ್ರಾಮೀಣ ಮಾರ್ಗದಿಂದ ವಿದ್ಯುತ್ ಪೂರೈಕೆ ನಡೆಯುತ್ತಿದೆ. ಕ್ಷೇತ್ರ ಪುನರ್ ವಿಂಗಡಣೆಯಾಗಿ ಹಲವು ವರ್ಷಗಳೇ ಕಳೆದಿದೆ" ಎಂದು ಅವರು ಉಲ್ಲೇಖಿಸಿದರು.
ಇಂದಿರಾ ಕಾಲೋನಿ, ಪೇಪರ್ ಮಿಲ್ ರಸ್ತೆ ಮತ್ತು ಅಮರ್ ದೀಪ್ ಕಾಲೋನಿಗಳಲ್ಲಿ ನೇತಾಡುತ್ತಿರುವ ತಂತಿಗಳು, ಮುರಿದ ಇನ್ಸುಲೇಟರ್, ಮತ್ತು ತೋಟಾ ಚೌಕ್ ನಲ್ಲಿ ಇನ್ನೂ ತೆರವುಗೊಳಿಸದ ಟ್ರಾನ್ಸ್‌ಫಾರ್ಮರ್ ಮುಂತಾದ ಸಮಸ್ಯೆಗಳನ್ನೂ ಶಾಸಕರು ಸಭೆಯಲ್ಲಿ ಚರ್ಚಿಸಿದರು.
ಸಾರ್ವಜನಿಕ ಕೆಲಸಗಳಲ್ಲಿ ಮಾಡುವ ನಿರ್ಲಕ್ಷಗಳನ್ನು ಸಹಿಸಲಾಗದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.