×
Ad

ಯಾಂತ್ರಿಕ ಅಥವಾ ನಿರ್ವಹಣಾ ಸಮಸ್ಯೆಗಳು ಕಂಡುಬಂದಿಲ್ಲ: ಎಎಐಬಿ ತನಿಖಾ ವರದಿ ಕುರಿತು ಏರ್ ಇಂಡಿಯಾ ಸಿಇಒ

Update: 2025-07-14 17:18 IST

ಹೊಸದಿಲ್ಲಿ: ವಿಮಾನ ಅಪಘಾತ ತನಿಖಾ ಘಟಕ(ಎಎಐಬಿ)ದ ಪ್ರಾಥಮಿಕ ತನಿಖಾ ವರದಿಯು ಅಪಘಾತಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿದ್ದಾರೆ. ಜೂ.12ರಂದು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಟೇಕಾಫ್ ಆಗಿದ್ದ ಏರ್ ಇಂಡಿಯಾ ವಿಮಾನವು ಕೆಲವೇ ಕ್ಷಣಗಳಲ್ಲಿ ಪತನಗೊಂಡು 200ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

ವಿಮಾನದಲ್ಲಿ ಅಥವಾ ಇಂಜಿನ್‌ಗಳಲ್ಲಿ ಯಾವುದೇ ಯಾಂತ್ರಿಕ ಅಥವಾ ನಿರ್ವಹಣಾ ಸಮಸ್ಯೆಗಳಿರಲಿಲ್ಲ ಮತ್ತು ಎಲ್ಲ ಕಡ್ಡಾಯ ನಿರ್ವಹಣಾ ಕಾರ್ಯಗಳನ್ನು ಪೂರ್ಣಗೊಳಿಸಲಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂಧನದ ಗುಣಮಟ್ಟದಲ್ಲಿ ಸಮಸ್ಯೆಯಿರಲಿಲ್ಲ ಮತ್ತು ಟೇಕಾಫ್ ಕೂಡ ಸಹಜವಾಗಿಯೇ ನಡೆದಿತ್ತು. ಪೈಲಟ್‌ಗಳು ತಮ್ಮ ಕಡ್ಡಾಯ ಹಾರಾಟ ಪೂರ್ವ ಬ್ರೀಥ್‌ಅನಲೈಸರ್ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಿದ್ದರು ಮತ್ತು ಅವರ ವೈದ್ಯಕೀಯ ಸ್ಥಿತಿಯ ಬಗ್ಗೆ ಯಾವುದೇ ನಕಾರಾತ್ಮಕ ಅವಲೋಕನಗಳು ಇರಲಿಲ್ಲ ಎಂದು ವಿಲ್ಸನ್ ಹೇಳಿದರು.

‘ಹೆಚ್ಚಿನ ಎಚ್ಚರಿಕೆಯೊಂದಿಗೆ ಮತ್ತು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯದ ಮೇಲ್ವಿಚಾರಣೆಯಡಿ ಅಪಘಾತದ ಬಳಿಕ ಕೆಲವೇ ದಿನಗಳಲ್ಲಿ ನಮ್ಮ ಪ್ರತಿಯೊಂದೂ ಬೋಯಿಂಗ್ 787 ವಿಮಾನವನ್ನು ತಪಾಸಣೆಗೊಳಪಡಿಸಿದ್ದು, ಎಲ್ಲವೂ ಹಾರಾಟಕ್ಕೆ ಅರ್ಹ ಎಂದು ಕಂಡುಬಂದಿದ್ದವು. ಎಲ್ಲ ಅಗತ್ಯ ತಪಾಸಣೆಗಳು ಮತ್ತು ಅಧಿಕಾರಿಗಳು ಸೂಚಿಸುವ ಯಾವುದೇ ಹೊಸ ತಪಾಸಣೆಗಳನ್ನು ಕೈಗೊಳ್ಳುವುದನ್ನು ನಾವು ಮುಂದುವರಿಸುತ್ತೇವೆ ’ಎಂದರು.

ಎಎಐಬಿ ಶುಕ್ರವಾರ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಬಿಡುಗಡೆಗೊಳಿಸಿದ್ದು,ವಿಮಾನದ ಇಂಜಿನ್‌ಗಳ ಇಂಧನ ಕಡಿತ ಸ್ವಿಚ್‌ಗಳು ಪರಸ್ಪರ ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ‘ಕಟ್‌ಆಫ್’ನಿಂದ ‘ರನ್’ ಸ್ಥಿತಿಗೆ ಬದಲಾಗಿದ್ದವು ಎನ್ನುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News