ಆರೆಸ್ಸೆಸ್ ವಿಶ್ವದ ಅತಿ ದೊಡ್ಡ ಸಂಘಟನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ: ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ (File Photo: PTI)
ಲಕ್ನೋ: “ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) 100 ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಸಂಘಟನೆಯಾಗಿ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, “100 ವರ್ಷಗಳ ಹಿಂದೆ ಒಂದು ಸಣ್ಣ ಕೋಣೆಯಲ್ಲಿ ಕೇವಲ ಐವರು ಅಥವಾ ಏಳು ಮಂದಿ ಸದಸ್ಯರೊಂದಿಗೆ ಆರೆಸ್ಸೆಸ್ ಸಂಘಟನೆ ಸ್ಥಾಪನೆಗೊಂಡಿತು. ಈಗ ಅದು ವಿಶ್ವದ ಬೃಹತ್ ಸಂಘಟನೆಯಾಗಿ ಬೆಳೆದು ನಿಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ” ಎಂದು ಹೇಳಿದ್ದಾರೆ.
“ಭಾರತೀಯ ಜನತಾ ಪಕ್ಷವು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿರುವುದು ದೈವಿಕ ಆಶೀರ್ವಾದ. ಪಕ್ಷದ ಏಳಿಗೆಗಾಗಿ ಅನೇಕರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ” ಎಂದು ಅವರು ಕೊಂಡಾಡಿದರು.
“ದೇಶದ ಪ್ರಗತಿಯ ವಿಚಾರಕ್ಕೆ ಬರುವುದಾದರೆ, 2014ರಲ್ಲಿ ನಾವು 11ನೇ ಸ್ಥಾನದಲ್ಲಿದ್ದೆವು. ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು, ಪ್ರಧಾನಿ ಮೋದಿಯ ನಾಯಕತ್ವದಲ್ಲಿ ನಾಲ್ಕನೆ ಸ್ಥಾನಕ್ಕೇರಿದ್ದೇವೆ. ಇನ್ನು ಎರಡ್ಮೂರು ವರ್ಷಗಳಲ್ಲಿ ನಾವು ಮೂರನೆಯ ಸ್ಥಾನಕ್ಕೆ ತಲುಪುತ್ತೇವೆ” ಎಂದೂ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.