ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವ ಯಾವುದೇ ಪ್ರಸ್ತಾವವಿಲ್ಲ: ಕೇಂದ್ರ ಸರಕಾರ
PC : PTI
ಹೊಸದಿಲ್ಲಿ: ಪೋಷಣ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಕೇಂದ್ರ ಸರಕಾರದ ಮುಂದಿಲ್ಲ ಎಂದು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, “ಅಂಗನವಾಡಿ ಕಾರ್ಯಕರ್ತೆಯರು ಗೌರವ ಕಾರ್ಯಕರ್ತೆಯರಾಗಿದ್ದು, ಅವರು ತಮ್ಮ ಸ್ಥಳೀಯ ಸಮುದಾಯಗಳಲ್ಲಿನ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿಗಾಗಿ ಸ್ವಯಂಸೇವಕಿಯರಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಪೋಷಣ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವ ಯಾವುದಾದರೂ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಪರಿಗಣಿಸುತ್ತಿದೆಯೆ ಎಂಬ ಪ್ರಶ್ನೆಗೆ, “ಸದ್ಯ ಅಂತಹ ಯಾವುದೇ ಪ್ರಸ್ತಾವ ಪರಿಗಣನೆಯಲ್ಲಿಲ್ಲ” ಎಂದು ಸಚಿವೆ ಠಾಕೂರ್ ಉತ್ತರಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಸ್ವಯಂಸೇವೆಗಾಗಿ ಅವರಿಗೆ ಗೌರವ ಧನ ನೀಡಲಾಗುತ್ತಿದ್ದು, ಈ ಗೌರವ ಧನವನ್ನು ಕೊನೆಯದಾಗಿ ಅಕ್ಟೋಬರ್ 1, 2018ರಂದು ಪರಿಷ್ಕರಿಸಲಾಗಿತ್ತು. ಸದ್ಯ ನಿಯಮಿತ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಮಾಸಿಕ 4,500 ರೂ. ಗೌರವ ಧನ ಸ್ವೀಕರಿಸುತ್ತಿದ್ದು, ಸಣ್ಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಮಾಸಿಕ 3,500 ರೂ. ಗೌರವ ಧನ ಸ್ವೀಕರಿಸುತ್ತಿದ್ದಾರೆ.
ಇದಲ್ಲದೆ, ಅಂಗನಾಡಿ ಸಹಾಯಕಿಯರಿಗೆ ಮಾಸಿಕ 2,250 ರೂ. ಗೌರವ ಧನ ನೀಡಲಾಗುತ್ತಿದೆ. ಇದರೊಂದಿಗೆ, ಸಾಮರ್ಥ್ಯಕ ಆಧಾರಿತ ಪ್ರೋತ್ಸಾಹ ಭತ್ಯೆಯಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 500 ರೂ. ನೀಡಲಾಗುತ್ತಿದ್ದರೆ, ಅಂಗನವಾಡಿ ಸಹಾಯಕಿಯರಿಗೆ ಮಾಸಿಕ 250 ರೂ. ಪ್ರೋತ್ಸಾಹ ಭತ್ಯೆ ನೀʻಡಲಾಗುತ್ತಿದೆ.