ಒಬ್ಬರನ್ನೊಬ್ಬರು ನಿಂದಿಸುವುದರಿಂದ ಏನೂ ಪ್ರಯೋಜನವಿಲ್ಲ: ಬಿಜೆಪಿಗೆ ಅರವಿಂದ ಕೇಜ್ರಿವಾಲ್ ಸಲಹೆ
"ಮನುಷ್ಯರು ಇತರರಿಗೆ ಸಹಾಯ ಮಾಡಬೇಕಾದ ಬಿಕ್ಕಟ್ಟಿನ ಪರಿಸ್ಥಿತಿ ಇದಾಗಿದೆ. ಒಬ್ಬರನ್ನೊಬ್ಬರು ನಿಂದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿನ್ನೆಯಿಂದ ಬಿಜೆಪಿ ನನ್ನನ್ನು ನಿಂದಿಸುತ್ತಿದೆ. ಅವರು ಅದನ್ನು ಮಾಡಲಿ, ನನಗೆ ಪರವಾಗಿಲ್ಲ" ಎಂದು ಕೇಜ್ರಿವಾಲ್ ಹೇಳಿದರು.
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ಪ್ರವಾಹದಿಂದಾಗಿ ಮುಚ್ಚಿರುವ ಮೂರು ಜಲ ಸಂಸ್ಕರಣಾ ಘಟಕಗಳಲ್ಲಿ ಒಂದನ್ನು ಶುಕ್ರವಾರ ಸಂಜೆ ಪುನರಾರಂಭಿಸಿದ ನಂತರ, ಉಳಿದ ಎರಡನ್ನು ಸಹ ಪುನರಾರಂಭಿಸಲಾಗುವುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಮತ್ತು ಹೆಚ್ಚಿನ ಮಳೆಯಾಗದಿದ್ದರೆ ಘಟಕ ತೆರೆಯಲಾಗುತ್ತದೆ. ಆದರೆ, ಶನಿವಾರ ಮತ್ತು ರವಿವಾರವೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಜ್ರಿವಾಲ್ ಅವರು, ದಿಲ್ಲಿಯಲ್ಲಿನ ತುರ್ತು ಪರಿಸ್ಥಿತಿಗೆ ಬೆರಳು ತೋರಿಸುವುದನ್ನು ಹಾಗೂ ಪರಸ್ಪರ ದೂಷಣೆ ಮಾಡುವುದನ್ನು ಬಿಡಬೇಕೆಂದು ಪದೇ ಪದೇ ಮನವಿ ಮಾಡಿದರು.
"ಮನುಷ್ಯರು ಇತರರಿಗೆ ಸಹಾಯ ಮಾಡಬೇಕಾದ ಬಿಕ್ಕಟ್ಟಿನ ಪರಿಸ್ಥಿತಿ ಇದಾಗಿದೆ. ಒಬ್ಬರನ್ನೊಬ್ಬರು ನಿಂದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿನ್ನೆಯಿಂದ ಬಿಜೆಪಿ ನನ್ನನ್ನು ನಿಂದಿಸುತ್ತಿದೆ. ಅವರು ಅದನ್ನು ಮಾಡಲಿ, ನನಗೆ ಪರವಾಗಿಲ್ಲ" ಎಂದು ಕೇಜ್ರಿವಾಲ್ ಹೇಳಿದರು.
ಹಲವು ದಿನಗಳಿಂದ ನಿರಂತರವಾಗಿ ಅಪಾಯದ ಮಟ್ಟಕ್ಕಿಂತ (205.33 ಮೀಟರ್) ಹೆಚ್ಚಿರುವ ಯಮುನಾ ನದಿಯ ನೀರಿನ ಮಟ್ಟವು ಶನಿವಾರ ಬೆಳಗಿನ ವೇಳೆಗೆ 207.7 ಕ್ಕೆ ಇಳಿದರೆ, ಚಂದ್ರವಾಲ್ ಮತ್ತು ವಜೀರಾಬಾದ್ನ ಉಳಿದ ಎರಡು ನೀರು ಸಂಸ್ಕರಣಾ ಘಟಕಗಳನ್ನು ಮತ್ತೆ ತೆರೆಯಲಾಗುವುದು ಎಂದು ಓಖ್ಲಾ ನೀರು ಸಂಸ್ಕರಣಾ ಘಟಕದ ಪುನರಾರಂಭದ ನಂತರ ಕೇಜ್ರಿವಾಲ್ ಹೇಳಿದರು.
"ನಾವು ಚಂದ್ರವಾಲ್ ಮತ್ತು ವಜೀರಾಬಾದ್ ನೀರು ಸಂಸ್ಕರಣಾ ಘಟಕಗಳಿಂದ ನೀರು ಹರಿಸಲು ಪ್ರಾರಂಭಿಸಿದ್ದೇವೆ. ಶೀಘ್ರದಲ್ಲೇ ಯಂತ್ರಗಳನ್ನು ಒಣಗಿಸಲಾಗುತ್ತದೆ. ಎರಡೂ ಘಟಕಗಳು ನಾಳೆಯೊಳಗೆ ಕಾರ್ಯನಿರ್ವಹಿಸುತ್ತವೆ" ಎಂದು ಅವರು ಹೇಳಿದರು.