ಮತ್ತಷ್ಟು ಬಿಗಡಾಯಿಸಿದ ಈಶಾನ್ಯ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ: 44 ಮಂದಿ ಮೃತ್ಯು
Photo credit: PTI
ಗುವಾಹಟಿ/ಇಂಫಾಲ/ಇಟಾನಗರ: ಈಶಾನ್ಯ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ ಹಾಗೂ ಭೂಕುಸಿತ ಮಂಗಳವಾರ ಮತ್ತಷ್ಟು ಬಿಗಡಾಯಿಸಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಮತ್ತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರದಿಂದ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ ತೀವ್ರ ಬಾಧಿತ ರಾಜ್ಯವಾಗಿದ್ದು, ಈ ಪ್ರವಾಹ ಪರಿಸ್ಥಿತಿಯಿಂದಾಗಿ 21 ಜಿಲ್ಲೆಗಳ 6.33 ಲಕ್ಷ ಮಂದಿ ತೊಂದರೆಗೊಳಗಾಗಿದ್ದಾರೆ. ಸೋಮವಾರ ಈ ಸಂಖ್ಯೆ 5.15 ಲಕ್ಷದಷ್ಟಿತ್ತು ಎನ್ನಲಾಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದು, ಅಸ್ಸಾಂನ ಹೈಲಾಕಾಂಡಿ, ಶ್ರೀಭೂಮಿ, ಮಾರಿಗಾಂವ್, ಕಚರ್, ಸೋನಿತ್ ಪುರ್ ಹಾಗೂ ತಿನ್ಸುಕಿಯ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಮಣಿಪುರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ, ಅರುಣಾಚಲ ಪ್ರದೇಶದಲ್ಲಿ ಓರ್ವ ಕೂಲಿ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಜಲ ಆಯೋಗದ ಪ್ರಕಾರ, ಬ್ರಹ್ಮಪುತ್ರ ನದಿ ನೀರಿನ ಪ್ರಮಾಣ ನಿಯಮತಿಘಾಟ್ ಹಾಗೂ ತೇಝ್ ಪುರ್ ಬಳಿ ಅಪಾಯಕಾರಿ ಮಟ್ಟ ಮೀರಿದೆ ಎನ್ನಲಾಗಿದೆ. ಬ್ರಹ್ಮಪುತ್ರ ನದಿಯ ಉಪನದಿಗಳಾದ ಬುರ್ಹಿದಿಹಿಂಗ್ ಮತ್ತು ಕೊಪಿಲಿಗಳೂ ಕೂಡಾ ಮಂಗಳವಾರ ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿವೆ ಎಂದು ಹೇಳಲಾಗಿದೆ.
ಈ ನಡುವೆ, ಮಂಗಳವಾರ ಬೆಳಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಗೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅವರಿಂದ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.