ಒಬಿಸಿ ಕೆನೆಪದರ ಆದಾಯ ಮಿತಿ ಪರಿಷ್ಕರಣೆ ಅಗತ್ಯ: ಸಂಸದೀಯ ಸಮಿತಿ ಆಗ್ರಹ
ಲೋಕಸಭೆ | PTI
ಹೊಸದಿಲ್ಲಿ,ಆ.8: ಕೆನೆಪದರದ ಆದಾಯ ಮಿತಿಯನ್ನು ಪರಿಷ್ಕರಿಸುವುದು ಇಂದಿನ ತುರ್ತು ಅಗತ್ಯವೆಂದು ಇತರ ಹಿಂದುಳಿದ ವರ್ಗಗಳ (ಒಬಿಸಿ) ಕಲ್ಯಾಣ ಯೋಜನೆಗಳ ಕುರಿತ ಸಂಸದೀಯ ಸಮಿತಿ ಶುಕ್ರವಾರ ತಿಳಿಸಿದೆ. ಕೆನೆಪದರಕ್ಕೆ ನಿಗದಿಪಡಿಸಲಾಗಿರುವ ಹಾಲಿ ಗರಿಷ್ಠ ಆದಾಯಮಿತಿಯು ಅರ್ಹ ಒಬಿಸಿ ಕುಟುಂಬಗಳನ್ನು ಮೀಸಲಾತಿ ಸೌಲಭ್ಯಗಳಿಂದ ಹೊರಗಿರಿಸಿದೆಯೆಂದು ಅದು ಪ್ರತಿಪಾದಿಸಿದೆ.
ಒಬಿಸಿ ವರ್ಗಗಳ ಕೆನೆಪದರ ಆದಾಯ ಮಿತಿಯನ್ನು ಕೊನೆಯ ಬಾರಿಗೆ 2017ರಲ್ಲಿ 6.5 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗೆ ಪರಿಷ್ಕರಿಸಲಾಗಿತ್ತು ಎಂದು ಸಮಿತಿಯು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ ತನ್ನ ಎಂಟನೇ ವರದಿಯಲ್ಲಿ ತಿಳಿಸಿದೆ.
ಹಾಲಿ ಒಬಿಸಿ ಕೆನೆಪದರ ಮಿತಿಯು ಇತರ ಹಿಂದುಳಿದ ವರ್ಗಗಳ ಒಂದು ಸಣ್ಣ ಸಮೂಹವನ್ನು ಮಾತ್ರ ಒಳಗೊಂಡಿದೆ ಎಂದು ಬಿಜೆಪಿ ಸಂಸದ ಗಣೇಶ್ ಸಿಂಗ್ ನೇತೃತ್ವದ ಸಮಿತಿಯ ವರದಿಯಲ್ಲಿ ತಿಳಿಸಿದೆ. ಪ್ರಸಕ್ತ ಹಣದುಬ್ಬರ ಏರಿಕೆಯಾಗಿರುವುದರಿಂದ ಹಾಗೂ ಕಡಿಮೆ ಆದಾಯದ ಗುಂಪುಗಳಲ್ಲಿಯೂ ವರಮಾನ ಹೆಚ್ಚಳವಾಗಿರುವುದರಿಂದ, ಕೆನೆಪದರ ಆದಾಯ ಮಿತಿಯ ಪರಿಷ್ಕರಣೆಯು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಸಿಬ್ಬಂದಿ ಹಾಗೂ ತರಬೇತಿ (ಡಿಓಪಿಟಿ)ಯ ನಿಯಮಗಳ ಪ್ರಕಾರ ಅಗತ್ಯವಿದ್ದಲ್ಲಿ ಕೆನೆಪದರ ಮಿತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಅಥವಾ ಅದಕ್ಕಿಂತ ಮುಂಚಿತವಾಗಿ ಪರಾಮರ್ಶಿಸಬಹುದಾಗಿದೆ. ಆದರೂ ಅದನ್ನು 2017ರಿಂದೀಚೆಗೆ ಪರಿಷ್ಕರಿಸಲಾಗಿಲ್ಲ. ಆದುದರಿಂದ ಓಬಿಸಿ ಸಮುದಾಯಗಳ ವ್ಯಕ್ತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೆನೆಪದರದೊಳಗೆ ತರಲು ಹಾಲಿ ಕೆನೆಪದರ ಆದಾಯಮಿತಿಯನ್ನು ಪರಿಷ್ಕರಿಸಬೇಕೆಂದು ಸಮಿತಿಯು ಖಡಾಖಂಡಿತವಾಗಿ ಪುನರುಚ್ಚರಿಸುತ್ತದೆ. ಇದು ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ಸಮಿತಿ ಹೇಳಿದೆ.
ಓಬಿಸಿ ಕೆನೆಪದರದ ಮಿತಿಯನ್ನು ನಿರ್ಧರಿಸುವ ಸ್ವಾಯತ್ತ ಘಟಕಗಳು ಹಾಗೂ ಸರಕಾರಿ ಹುದ್ದೆಗಳನ್ನು ನಿರ್ಧರಿಸಲು ಸ್ವಾಯತ್ತ ಸಂಸ್ಥೆಗಳು ಮತ್ತು ಸರಕಾರಿ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿರುವ ಬಗ್ಗೆಯೂ ಸಮಿತಿಯು ಬೆಟ್ಟು ಮಾಡಿ ತೋರಿಸಿದೆ.
ಆದರೆ ಒಬಿಸಿ ಕೆನೆಪದರ ಮಿತಿಯನ್ನು ಪರಿಷ್ಕರಿಸುವ ಯಾವುದೇ ಪ್ರಸ್ತಾವನೆಯನ್ನು ತಾನು ಪರಿಶೀಲಿಸುತ್ತಿಲ್ಲವೆಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯವು ತಿಳಿಸಿದೆ.