ಒಡಿಶಾ: ಸುಬರ್ಣರೇಖಾ ನದಿಯಲ್ಲಿ ದಿಡೀರ್ ಪ್ರವಾಹ; 50 ಸಾವಿರಕ್ಕೂ ಅಧಿಕ ಜನರು ಸಂತ್ರಸ್ತ
PC : PTI
ಭುವನೇಶ್ವರ: ಜಾರ್ಖಂಡ್ ನಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಶನಿವಾರ ಸುಬರ್ಣರೇಖಾ ನದಿಯಲ್ಲಿ ದಿಡೀರ್ ಪ್ರವಾಹ ಉಂಟಾದ ಪರಿಣಾಮ ಒಡಿಶಾದ ಬಾಲಸೋರೆ ಜಿಲ್ಲೆಯ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು, 50 ಸಾವಿರಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ.
ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಜನರಿಗೆ ಎಚ್ಚರಿಕೆ ನೀಡಿದೆ. ಜಿಲ್ಲಾಡಳಿತ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೋಗ್ರಿಯಾ, ಬಲಿಯಪಾಲ್, ಬಸ್ತಾ ಬ್ಲಾಕ್‌ಗಳ 17ಕ್ಕೂ ಅಧಿಕ ಗ್ರಾಮ ಪಂಚಾಯತ್‌ಗಳ ಪ್ರದೇಶಗಳು ಹಾಗೂ ಜಾಲೇಶ್ವರ ನೋಟಿಫೈಡ್ ಏರಿಯಾ ಕೌನ್ಸಿಲ್ (ಎನ್‌ಎಸಿ) ಭಾಗ ನೆರೆ ಪೀಡಿತವಾಗಿವೆ ಎಂದು ಅವರು ತಿಳಿಸಿದ್ದಾರೆ.
ತಗ್ಗು ಪ್ರದೇಶ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಪರಿಸ್ಥಿತಿ ಹದಗೆಡುತ್ತಿರುವುದರಿಂದ ಸಮೀಪದ ಆಶ್ರಯ ತಾಣಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧವಾಗಿರುವಂತೆ ಅವರಿಗೆ ಸೂಚಿಸಲಾಗಿದೆ.
ಅಗತ್ಯ ಬಿದ್ದರೆ, ಜನರನ್ನು ತೆರವುಗೊಳಿಸಲು ಸಿದ್ಧರಾಗಿರುವಂತೆ ಬಾಲಸೋರೆ ಜಿಲ್ಲಾಧಿಕಾರಿ ಸೂರ್ಯವಂಶಿ ಮಯೂರ್ ವಿಕಾಸ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ)ಗಳು ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ಪರಿಸ್ಥಿತಿಯ ಕುರಿತು ನಿಗಾ ಇರಿಸುವಂತೆ ಹಾಗೂ ನೆರೆ ಪೀಡಿತ ಜನರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಂತ್ರಸ್ತರಿಗೆ ಒಣ ಆಹಾರ ವಸ್ತುಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಬಿಡಿಒ ಅವರಿಗೆ ನಿರ್ದೇಶಿಸಲಾಗಿದೆ.
ಅಗತ್ಯದ ಔಷಧಗಳನ್ನು ಸಾಕಷ್ಟು ದಾಸ್ತಾನು ಇರಿಸುವಂತೆ ಹಾಗೂ ಆರೋಗ್ಯ ಸೇವೆಯ ವ್ಯವಸ್ಥೆಗಳನ್ನು ಸಿದ್ಧವಾಗಿ ಇರಿಸುವಂತೆ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ) ಅವರಿಗೆ ನಿರ್ದೇಶಿಸಲಾಗಿದೆ.