ಒಡಿಶಾ | ದಲಿತ ವ್ಯಕ್ತಿಗಳಿಬ್ಬರನ್ನು ಬಲವಂತದಿಂದ ಎರಡು ಕಿ.ಮೀ. ದೂರ ತೆವಳುವಂತೆ ಮಾಡಿ ಚರಂಡಿ ನೀರು ಕುಡಿಸಿದ ಗುಂಪು
ಸಾಂದರ್ಭಿಕ ಚಿತ್ರ
ಗಂಜಾಮ್: ಜನರ ಗುಂಪೊಂದು ಇಬ್ಬರು ದಲಿತ ವ್ಯಕ್ತಿಗಳಿಗೆ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಿದ ಘಟನೆ ರವಿವಾರ ದಕ್ಷಿಣ ಒಡಿಶಾದ ಗಂಜಾಮ್ ಜಿಲ್ಲೆಯ ಖರಿಗುಮ್ಮ ಗ್ರಾಮದಲ್ಲಿ ನಡೆದಿದೆ.
ಧರಾಕೋಟ್ ಬ್ಲಾಕ್ನ ಸಿಂಗಿಪುರ ಗ್ರಾಮದ ನಿವಾಸಿಗಳಾದ ಬುಲು ನಾಯಕ್ ಮತ್ತು ಬಾಬುಲ ನಾಯಕ್(ಇಬ್ಬರೂ 40ರ ಹರೆಯದವರು) ತಮ್ಮ ಪುತ್ರಿಯರ ಮದುವೆಗೆ ವರದಕ್ಷಿಣೆಯ ಭಾಗವಾಗಿ ಮೂರು ಹಸುಗಳನ್ನು ಖರೀದಿಸಿ ಗ್ರಾಮಕ್ಕೆ ಮರಳುತ್ತಿದ್ದಾಗ ಗುಂಪೊಂದು ಅವರನ್ನು ತಡೆದು ನಿಲ್ಲಿಸಿತ್ತು.
ಅವರು ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿದ್ದ ಗುಂಪು ಹಣಕ್ಕಾಗಿ ಬೇಡಿಕೆಯನ್ನಿಟ್ಟಿತ್ತು. ನಿರಾಕರಿಸಿದಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ತಲೆಗಳನ್ನು ಭಾಗಶಃ ಬೋಳಿಸಿದ್ದರು. ಇಷ್ಟು ಸಾಲದೆಂಬಂತೆ ಅವರನ್ನು ಖರಿಗುಮ್ಮದಿಂದ ಜಹಡಾವರೆಗೆ ಎರಡು ಕಿ.ಮೀ.ದೂರ ಮೊಣಕಾಲುಗಳ ಮೇಲೆ ತೆವಳಿಕೊಂಡು ಸಾಗುವಂತೆ ಮಾಡಲಾಗಿತ್ತು. ಅವರಿಗೆ ಬಲವಂತದಿಂದ ಹುಲ್ಲು ತಿನ್ನಿಸಿ ಚರಂಡಿಯ ನೀರನ್ನು ಕುಡಿಸಲಾಗಿತ್ತು.
ಈ ಘಟನೆಯು ಇತ್ತೀಚಿನ ವರ್ಷಗಳಲ್ಲಿ ದೇಶದ ಹಲವು ಭಾಗಗಳಲ್ಲಿ, ವಿಶೇಷವಾಗಿ ಗೋ ರಕ್ಷಣೆಯು ರಾಜಕೀಯ ವಿಷಯವಾದ ಬಳಿಕ ಜಾತಿ ಆಧಾರಿತ ಅವಮಾನ ಮತ್ತು ಗುಂಪು ದಬ್ಬಾಳಿಕೆಯ ಕ್ರೂರ ನೆನಪುಗಳು ಮರುಕಳಿಸುವಂತೆ ಮಾಡಿದೆ.
ಒಡಿಶಾದಲ್ಲಿ ಇಂತಹ ವಿಷಯಗಳು ವಿರಳವಾಗಿದ್ದರೂ ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೇರಿದ ಬಳಿಕ ನಡೆದಿರುವ ಈ ಘಟನೆಯು ರಾಜಕೀಯ ಬಣ್ಣವನ್ನು ಪಡೆದುಕೊಳ್ಳಬಹುದು.
ಈ ಘಟನೆಯು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂತ್ರಸ್ತರು ಸಲ್ಲಿಸಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಸ್ಥಳೀಯ ಪೋಲಿಸರು ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತ್ವರಿತ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ. ನಾಗರಿಕ ಸಮಾಜ ಗುಂಪುಗಳೂ ಘಟನೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ.