×
Ad

ಒಡಿಶಾ | ಮೂವರು ದುಷ್ಕರ್ಮಿಗಳಿಂದ 15 ವರ್ಷದ ಬಾಲಕಿಗೆ ಬೆಂಕಿ

Update: 2025-07-19 21:54 IST

ಸಾಂದರ್ಭಿಕ ಚಿತ್ರ

ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ಶಿಕ್ಷಕನೊಬ್ಬನ ಲೈಂಗಿಕ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೊಬ್ಬರು ಇತ್ತೀಚೆಗೆ ಬೆಂಕಿಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡಿರುವ ಘಟನೆ ಬೆನ್ನಿಗೇ, ರಾಜ್ಯದ ಪುರಿ ಜಿಲ್ಲೆಯಲ್ಲಿ ಶನಿವಾರ ಮೂವರು ದುಷ್ಕರ್ಮಿಗಳು 15 ವರ್ಷದ ಬಾಲಕಿಯೊಬ್ಬಳಿಗೆ ಬೆಂಕಿ ಹಚ್ಚಿದ್ದಾರೆ.

ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಭುವನೇಶ್ವರದ ಎಐಐಎಮ್‌ಎಸ್‌ಗೆ ದಾಖಲಿಸಲಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬಯಾಬರ್ ಗ್ರಾಮದಲ್ಲಿ ಬಾಲಕಿಯು ತನ್ನ ಸ್ನೇಹಿತೆಯ ಮನೆಗೆ ಹೋಗುತ್ತಿದ್ದಾಗ ಮೂವರು ದುಷ್ಕರ್ಮಿಗಳು ಬೆಂಕಿ ಹಚ್ಚಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಂಕಿ ಕೊಟ್ಟ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

‘‘ಪುರಿ ಜಿಲ್ಲೆಯ ಬಲಂಗದಲ್ಲಿ ಕೆಲವು ದುಷ್ಕರ್ಮಿಗಳು ರಸ್ತೆಯಲ್ಲಿ 15 ವರ್ಷದ ಬಾಲಕಿಯೊಬ್ಬಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂಬ ಸುದ್ದಿ ಕೇಳಿ ನನಗೆ ಆಘಾತವಾಗಿದೆ’’ ಎಂದು ಉಪಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿ ಹೊತ್ತಿರುವ ಪಾರ್ವತಿ ಪರಿದ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.

‘‘ಬಾಲಕಿಯನ್ನು ಏಮ್ಸ್ ಭುವನೇಶ್ವರಕ್ಕೆ ದಾಖಲಿಸಲಾಗಿದೆ. ಅವರ ಚಿಕಿತ್ಸೆಗಾಗಿ ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದೆ. ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಸರಕಾರ ಭರಿಸುವುದು. ಪಾತಕಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ’’ ಎಂದು ಉಪಮುಖ್ಯಮಂತ್ರಿ ಹೇಳಿದರು.

ಜುಲೈ 12ರಂದು ಬಾಲಸೋರ್‌ನಲ್ಲಿ, ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜ್‌ನ 20 ವರ್ಷದ ವಿದ್ಯಾರ್ಥಿನಿಯೊಬ್ಬರು ಬೆಂಕಿಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದರು. ಶಿಕ್ಷಕನೊಬ್ಬ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ತಾನು ನೀಡಿದ ದೂರಿನ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಹತಾಶೆಗೊಂಡು ಅವರು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದರು.

ಜುಲೈ 12ರಂದು ಕಾಲೇಜು ಆವರಣದಲ್ಲೇ ಅವರು ತನ್ನ ಮೇಲೆ ಬೆಂಕಿ ಹಚ್ಚಿಕೊಂಡಿದ್ದರು. ಜುಲೈ 14ರ ರಾತ್ರಿ ಅವರು ಏಮ್ಸ್ ಭುವನೇಶ್ವರದಲ್ಲಿ ಕೊನೆಯುಸಿರೆಳೆದರು. ಬಳಿಕ, ಪ್ರಕರಣಕ್ಕೆ ಸಂಬಂಧಿಸಿ ಸಹಾಯಕ ಪ್ರೊಫೆಸರ್ ಒಬ್ಬರನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News