×
Ad

ಒಡಿಶಾ | ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಥಳಿಸಿ ಬಿಜೆಪಿ ನಾಯಕನಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಿದ ದುಷ್ಕರ್ಮಿಗಳ ಗುಂಪು

Update: 2025-07-01 14:01 IST

Screengrab:X/@Naveen_Odisha

ಭುವನೇಶ್ವರ: ಸೋಮವಾರ ದುಷ್ಕರ್ಮಿಗಳ ಗುಂಪೊಂದು ಭುವನೇಶ್ವರ ಮಹಾನಗರ ಪಾಲಿಕೆಯ ಕರ್ತವ್ಯನಿರತ ಹಿರಿಯ ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು, ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಭುವನೇಶ್ವರ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ತಮ್ಮ ಕೊಠಡಿಯಲ್ಲಿ ಕುಂದುಕೊರತೆ ಪರಿಹಾರ ಸಭೆ ನಡೆಸುವಾಗ ಈ ಘಟನೆ ನಡೆದಿದೆ.

ಈ ಸಂಬಂಧ ರತ್ನಾಕರ್ ಸಾಹೂ ದಾಖಲಿಸಿರುವ ಪೊಲೀಸ್ ದೂರಿನ ಪ್ರಕಾರ, ನನ್ನ ಕೊಠಡಿಗೆ ನುಗ್ಗಿದ ಸುಮಾರು ಆರರಿಂದ ಏಳು ಮಂದಿ ಅಪರಿಚಿತರು, ಭುವನೇಶ್ವರದ ಬಿಜೆಪಿ ನಾಯಕ ಜಗನ್ನಾಥ್ ಪ್ರಧಾನ್ ರೊಂದಿಗೆ ಮಾತನಾಡಿದಿರಾ ಎಂದು ನನ್ನನ್ನು ಆಕ್ರಮಣಕಾರಿಯಾಗಿ ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ, 'ಬೆಳಗ್ಗೆ ಪ್ರಧಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ'ದ ಎಂದು ನಾನು ಅವರಿಗೆ ಉತ್ತರಿಸಿರುವುದಾಗಿ ಅವರು ಹೇಳಿದ್ದಾರೆ.

ಇದರ ಬೆನ್ನಿಗೇ, ಯಾವುದೇ ಪ್ರಚೋದನೆ ಇಲ್ಲದೆ ನನ್ನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ ಗುಂಪು, ನಾನು ಪ್ರಧಾನ್ ರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿತು ಎಂದೂ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

“ನನ್ನನ್ನು ಹತ್ಯೆಗೈಯ್ಯುವ ಪ್ರಯತ್ನದೊಂದಿಗೆ ಭುವನೇಶ್ವರ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳು, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರೆದುರು ಅವರು ನನ್ನ ಮೇಲೆ ಬಹಿರಂಗವಾಗಿಯೇ ಅಮಾನುಷವಾಗಿ ಹಲ್ಲೆ ನಡೆಸಿದರು. ನಾನು ಅವರ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಹಾಗೂ ಅವರ ಕ್ಷಮೆ ಕೋರಲು ಯತ್ನಿಸಿದಾಗ, ಅವರು ನನಗೆ ಬೆದರಿಕೆ ಒಡ್ಡಿದರು ಹಾಗೂ ನಾನು ಜಗನ್ನಾಥ್ ಪ್ರಧಾನ್ ಬಳಿ ಬರಲೇಬೇಕು ಹಾಗೂ ಅವರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ, ನನ್ನನ್ನು ಬಲವಂತವಾಗಿ ವಾಹನವೊಂದರ ಒಳಕ್ಕೆ ಎಳೆದುಕೊಳ್ಳಲು ಪ್ರಯತ್ನಿಸಿದರು” ಎಂದು ಅವರು ತಮ್ಮ ದೂರಿನಲ್ಲಿ ಆಪಾದಿಸಿದ್ದಾರೆ.

ಆದರೆ, ರತ್ನಾಕರ್ ಸಾಹೂ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಕಾರಣವೇನು ಎಂಬ ಸಂಗತಿ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದ್ದು, ಹಲ್ಲೆಗೆ ಸಂಬಂಧಿಸಿದಂತೆ ಭುವನೇಶ್ವರ ಮಹಾನಗರ ಪಾಲಿಕೆ ಕಾರ್ಪೊರೇಟರ್ ಸೇರಿದಂತೆ ಒಟ್ಟು ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇತರರು ಭಾಗಿಯಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ಒಡಿಶಾ ರಾಜಕಾರಣದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್, “ಇದು ಭಯಾನಕ ಘಟನೆಯಾಗಿದ್ದು, ಈ ಕುರಿತು ತ್ವರಿತ ಹಾಗೂ ಮಾದರಿಯಾಗುವಂತಹ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಒಂದು ವೇಳೆ ಹಿರಿಯ ಅಧಿಕಾರಿಯೊಬ್ಬರೇ ತಮ್ಮ ಕಚೇರಿಯಲ್ಲಿ ಸುರಕ್ಷಿತವಲ್ಲವೆಂದಾದರೆ, ನಾಗರಿಕರು ಸರಕಾರದಿಂದ ಇನ್ನೆಂಥ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರೀಕ್ಷಿಸಲು ಸಾಧ್ಯ?" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಜಗನ್ನಾಥ್ ಪ್ರಧಾನ್, ಈ ಹಲ್ಲೆಯಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳು ನನಗೆ ಪರಿಚಿತರಾಗಿದ್ದಾರೆ. ಬಿಜೆಪಿ ಸರಕಾರ ಈ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸಬಾರದು ಹಾಗೂ ಈ ಹಲ್ಲೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿಬೇಕು ಎಂದು ಆಗ್ರಹಿಸಿದ್ದಾರೆ.

ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಭುವನೇಶ್ವರ ಮಹಾನಗರ ಪಾಲಿಕೆಯ ಅಧಿಕಾರಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ, ಮಹಾನಗರ ಪಾಲಿಕೆ ಎದುರಿನ ಪ್ರಮುಖ ರಸ್ತೆಯೊಂದನ್ನು ತಡೆದು, ಪ್ರತಿಭಟನೆ ನಡೆಸಿದರು. ಈ ವೇಳೆ, ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಘಟನೆಯ ಹಿನ್ನೆಲೆಯಲ್ಲಿ ಭುವನೇಶ್ವರ ಮಹಾನಗರ ಪಾಲಿಕೆ ಕಚೇರಿಯ ಆವರಣದೊಳಗೆ ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News