ಒಡಿಶಾ | ಪುರಿಯಲ್ಲಿ ಬಾಲಕಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ತಿರುವು; ಪೊಲೀಸರು ಹೇಳಿದ್ದೇನು?
Photo credit: NDTV
ಭುವನೇಶ್ವರ: ಒಡಿಶಾದ ಪುರಿ ಜಿಲ್ಲೆಯಲ್ಲಿ 15 ವರ್ಷದ ಬಾಲಕಿ ಮೇಲೆ ಮೂವರು ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಬಾಲಕಿ ಬೆಂಕಿ ಹಚ್ಚಿಕೊಂಡ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಒಡಿಶಾ ಪೊಲೀಸರು ಹೇಳಿದ್ದಾರೆ.
ಜುಲೈ 19ರಂದು ಪುರಿ ಜಿಲ್ಲೆಯ ಬಲಂಗದಲ್ಲಿ ಕೆಲವು ದುಷ್ಕರ್ಮಿಗಳು 15 ವರ್ಷದ ಬಾಲಕಿಯೊಬ್ಬಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎಂದು ಆರೋಪಿಸಲಾಗಿತ್ತು. ಸುಟ್ಟ ಗಾಯಗಳೊಂದಿಗೆ ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಶನಿವಾರ ಮೃತಪಟ್ಟಿದ್ದಾಳೆ.
ಒಡಿಶಾ ಪೊಲೀಸರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ʼಬಲಂಗಾ ಘಟನೆಯಲ್ಲಿ ಮೃತಪಟ್ಟ ಬಾಲಕಿಯ ಸಾವಿನ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಗಿದೆ. ಈ ಕುರಿತು ಪೊಲೀಸರು ಅತ್ಯಂತ ಪ್ರಾಮಾಣಿಕತೆಯಿಂದ ತನಿಖೆ ನಡೆಸುತ್ತಿದ್ದು, ತನಿಖೆ ಅಂತಿಮ ಹಂತವನ್ನು ತಲುಪಿದೆ. ಇಲ್ಲಿಯವರೆಗೆ ನಡೆಸಿದ ತನಿಖೆಯ ಪ್ರಕಾರ, ಪ್ರಕರಣದಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಈ ವಿಷಯದ ಬಗ್ಗೆ ಯಾವುದೇ ಸೂಕ್ಷ್ಮ ಹೇಳಿಕೆಗಳನ್ನು ನೀಡದಂತೆ ನಾವು ವಿನಂತಿಸುತ್ತೇವೆʼ ಎಂದು ಹೇಳಿದೆ.
ಬಾಲಕಿಯ ತಾಯಿ ಜುಲೈ 19ರಂದು ಬಲಂಗಾ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ಎಫ್ಐಆರ್‌ನಲ್ಲಿ, ನನ್ನ ಮಗಳನ್ನು ಮೂವರು ಅಪಹರಿಸಿ ಆಕೆಯ ಮೇಲೆ ದ್ರವ ರೂಪದ ವಸ್ತುವನ್ನು ಹಾಕಿ ಬೆಂಕಿಹಚ್ಚಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕರಣ ದಾಖಲಾದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.