ಒಡಿಶಾ ರೈಲು ದುರಂತ: ಮತ್ತೆ 13 ಮೃತದೇಹಗಳು ಕುಟುಂಬಕ್ಕೆ ಹಸ್ತಾಂತರ
Update: 2023-07-02 21:57 IST
Photo: PTI
ಭುವನೇಶ್ವರ: ಭುವನೇಶ್ವರದ ಏಮ್ಸ್ ನಲ್ಲಿ ಇರಿಸಲಾಗಿದ್ದ ಬಾಲಸೋರ್ ರೈಲು ಅಪಘಾತದಲ್ಲಿ ಮೃತಪಟ್ಟ ಕನಿಷ್ಠ 13 ಮಂದಿಯ ಮೃತದೇಹವನ್ನು ಅವರ ಕುಟುಂಬಕ್ಕೆ ಶನಿವಾರ ಹಸ್ತಾಂತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಡಿಎನ್ಎ ಮಾದರಿ ಬಳಸಿ ಗುರುತಿಸಲಾದ 29 ಮೃತದೇಹಗಳಲ್ಲಿ 6 ಮೃತದೇಹಗಳನ್ನು ಜೂನ್ 30ರಂದು ಹಾಗೂ 13 ಮೃತದೇಹಗಳನ್ನು ಜುಲೈ 1ರಂದು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಡಿಎನ್ಎ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಹಾಗೂ ಭುವನೇಶ್ವರದ ಏಮ್ಸ್, ಭುವನೇಶ್ವರದ ಮಹಾನಗರ ಪಾಲಿಕೆ, ಜಿಆರ್ಪಿಯ ಸಮನ್ವಯದೊಂದಿಗೆ 13 ಮಂದಿಯ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. 13 ಮೃತದೇಹಗಳಲ್ಲಿ 4 ಬಿಹಾರಕ್ಕೆ, 8 ಪಶ್ಚಿಮಬಂಗಾಳಕ್ಕೆ ಹಾಗೂ 1 ಜಾರ್ಖಂಡ್ಗೆ ಕಳುಹಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.