×
Ad

‘ಒಂದು ದೇಶ, ಒಂದು ಚುನಾವಣೆ’ ಸಾಂವಿಧಾನಿಕವಾಗಿ ಕಾರ್ಯ ಸಾಧುವಲ್ಲ: ಉದಯನಿಧಿ ಸ್ಟಾಲಿನ್

Update: 2025-02-06 22:23 IST

Photo Credit: PTI

ತಿರುವನಂತಪುರ: ‘ಒಂದು ದೇಶ, ಒಂದು ಚುನಾವಣೆ’ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತರುವ ಕೇಂದ್ರ ಸರಕಾರದ ಚಿಂತನೆ ದೇಶದ ಒಕ್ಕೂಟ ವ್ಯವಸ್ಥೆಯ ಮೇಲಿನ ಆಕ್ರಮಣವಾಗಲಿದೆ. ಅಲ್ಲದೆ, ಇದು ಸಂವಿಧಾನಾತ್ಮಕವಾಗಿ ಕಾರ್ಯಸಾಧುವಲ್ಲ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಗುರುವಾರ ಹೇಳಿದ್ದಾರೆ.

ಇಲ್ಲಿ ಮಾತೃಭೂಮಿ ಇಂಟರ್ನ್ಯಾಷನಲ್ ಫೆಸ್ಟಿವಲ್ ಆಫ್ ಲೆಟರ್ಸ್ (ಎಂಬಿಐಎಪ್ಎಲ್)ನ 6ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ‘‘ಈ ಪ್ರಸ್ತಾವನೆ ಒಕ್ಕೂಟ ವ್ಯವಸ್ಥೆಯನ್ನು ದೃಢೀಕರಿಸುವ ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸುತ್ತದೆ’’ ಎಂದರು.

ಇತ್ತೀಚೆಗಿನ ಜನಗಣತಿಯ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನು ಪುನರ್ವಿಂಗಡಿಸುವ ಕೇಂದ್ರ ಸರಕಾರದ ಕ್ರಮವನ್ನು ಕೂಡ ಅವರು ತೀವ್ರವಾಗಿ ಟೀಕಿಸಿದರು. ಇದು ತಮಿಳುನಾಡು, ಕೇರಳದಂತಹ ದಕ್ಷಿಣದ ರಾಜ್ಯಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ನೂತನ ಪುನರ್ ವಿಂಗಡಣೆಯನ್ನು ಅನುಷ್ಠಾನಗೊಳಿಸಿದರೆ, ತಮಿಳುನಾಡು ಹಾಗೂ ಕೇರಳ ಸಂಸತ್ತಿನ ತಮ್ಮ ಪ್ರಸಕ್ತ ಪ್ರಾತಿನಿಧ್ಯವನ್ನು ಕಳೆದುಕೊಳ್ಳಲಿದೆ. ಇದು ದಕ್ಷಿಣದ ರಾಜ್ಯಗಳ ಧ್ವನಿಯನ್ನು ಕಡಿಮೆ ಮಾಡುವ ಸ್ಪಷ್ಟ ಕಾರ್ಯಸೂಚಿಯಂತೆ ಕಾಣುತ್ತದೆ ಎಂದು ಉದಯನಿಧಿ ಹೇಳಿದ್ದಾರೆ.

ವಿಶ್ವವಿದ್ಯಾನಿಲಯಗಳಲ್ಲಿ ಉಪ ಕುಲಪತಿಗಳ ನೇಮಕಾತಿ ಸೇರಿದಂತೆ ಶಿಕ್ಷಣದ ವಿಷಯಗಳ ಕುರಿತ ವಿವಿಧ ಕ್ರಮಗಳನ್ನು ಶಿಫಾರಸು ಮಾಡುವ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ಇತ್ತೀಚೆಗಿನ ಕರಡು ಮಾರ್ಗಸೂಚಿಗಳಿಗೆ ‘ಇಂಡಿಯಾ’ ಮೈತ್ರಿಕೂಟದ ಎಲ್ಲಾ ಪಕ್ಷಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ನಲ್ಲಿ ಕೇರಳ ಹಾಗೂ ತಮಿಳುನಾಡನ್ನು ಕೇಂದ್ರ ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ
https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News