ಆಪರೇಷನ್ ಸಿಂಧೂರ | ನಾಲ್ಕು ದಿನಗಳ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ವಿಮಾನಗಳು ಪತನ
PC : PTI
ಹೊಸದಿಲ್ಲಿ: ಇತ್ತೀಚಿನ ‘ಆಪರೇಷನ್ ಸಿಂಧೂರ’ ಕುರಿತು ಹೆಚ್ಚಿನ ವಿವರಗಳು ಹೊರಬರುತ್ತಿದ್ದಂತೆ ಪಾಕಿಸ್ತಾನಕ್ಕೆ ಉಂಟಾಗಿರುವ ನಷ್ಟದ ಪ್ರಮಾಣ ಹೆಚ್ಚು ಸ್ಪಷ್ಟವಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆ(ಐಎಎಫ್)ಯು ನಡೆಸಿದ್ದ ದಾಳಿಗಳು ಯುದ್ಧವಿಮಾನಗಳು, ಕಣ್ಗಾವಲು ವಿಮಾನಗಳು,ಡ್ರೋನ್‌ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳು ಸೇರಿದಂತೆ ಪಾಕಿಸ್ತಾನದ ಮಿಲಿಟರಿ ಸ್ವತ್ತುಗಳನ್ನು ಗಮನಾರ್ಹ ಪ್ರಮಾಣದಲ್ಲಿ ನಾಶಗೊಳಿಸಿದ್ದು,ನಾಲ್ಕೇ ದಿನಗಳಲ್ಲಿ ಕದನ ವಿರಾಮಕ್ಕೆ ಕೋರುವುದನ್ನು ಆ ದೇಶಕ್ಕೆ ಅನಿವಾರ್ಯವಾಗಿಸಿತ್ತು.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ರಕ್ಷಣಾ ಮೂಲಗಳ ಆಧಾರದಲ್ಲಿ ಸುದ್ದಿಸಂಸ್ಥೆಯ ವರದಿಯ ಪ್ರಕಾರ,ಐಎಎಫ್ ಕನಿಷ್ಠ ಆರು ಪಾಕಿಸ್ತಾನಿ ಯುದ್ಧವಿಮಾನಗಳು,ಎರಡು ಹೆಚ್ಚಿನ ಮೌಲ್ಯದ ಕಣ್ಗಾವಲು ವಿಮಾನಗಳು ಮತ್ತು ಒಂದು ಸಿ-130 ಸಾರಿಗೆ ವಿಮಾನವನ್ನು ನಾಶಗೊಳಿಸಿದೆ. ಮೇ 6ರಂದು ರಾತ್ರಿ ಆರಂಭಗೊಂಡು ಮೇ 10ರಂದು ಮುಕ್ತಾಯಗೊಂಡ ಭಾರತದ ನಿಖರ ವಾಯುದಾಳಿಗಳಲ್ಲಿ ಪಾಕಿಸ್ತಾನವು 10ಕ್ಕೂ ಅಧಿಕ ಸಶಸ್ತ್ರ ಡ್ರೋನ್‌ಗಳು,ಹಲವಾರು ಕ್ರೂಸ್ ಕ್ಷಿಪಣಿಗಳು ಮತ್ತು ರಾಡಾರ್ ತಾಣಗಳನ್ನೂ ಕಳೆದುಕೊಂಡಿದೆ.
ಭೋಲಾರಿಯಂತಹ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದ್ದ ಐಎಎಫ್ ದಾಳಿಗಳಲ್ಲಿ ಬ್ರಹ್ಮೋಸ್‌ನಂತಹ ನೆಲದಿಂದ ನೆಲಕ್ಕೆ ಚಿಮ್ಮುವ ಶಸ್ತ್ರಾಸ್ತ್ರಗಳ ಬದಲಿಗೆ ಆಗಸದಿಂದ ಉಡಾಯಿಸಲಾಗುವ ಕ್ರೂಸ್ ಕ್ಷಿಪಣಿಗಳನ್ನು ಬಳಸಲಾಗಿತ್ತು. ಇಲೆಕ್ಟ್ರಾನಿಕ್ ಯುದ್ಧತಂತ್ರ ಮತ್ತು ಕಣ್ಗಾವಲು ಸಾಧನಗಳ ಬೆಂಬಲದೊಂದಿಗೆ ರಫೇಲ್ ಮತ್ತು ಎಸ್‌ಯು-30 ಎಂಕೆಐ ಯುದ್ಧವಿಮಾನಗಳ ಮೂಲಕ ದಾಳಿಗಳನ್ನು ನಡೆಸಲಾಗಿತ್ತು.
ಅತ್ಯಂತ ಗಮನಾರ್ಹ ದಾಳಿಗಳಲ್ಲೊಂದರಲ್ಲಿ ಭಾರತದ ವಾಯುರಕ್ಷಣಾ ವ್ಯವಸ್ಥೆ ‘ಸುದರ್ಶನ’ ಪಾಕಿಸ್ತಾನದ ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್(ಎಇಡಬ್ಲ್ಯುಸಿ) ವಿಮಾನ ಅಥವಾ ಇಲೆಕ್ಟ್ರಾನಿಕ್ ಯುದ್ಧತಂತ್ರವನ್ನು ಹೊಂದಿದ್ದ ಜೆಟ್ ವಿಮಾನವನ್ನು ಸುಮಾರು 300 ಕಿ.ಮೀ.ದೂರದಿಂದಲೇ ಹೊಡೆದುರುಳಿಸಿತ್ತು.
ಭೋಲಾರಿ ವಾಯುನೆಲೆಯ ಹ್ಯಾಂಗರ್‌ನಲ್ಲಿ ನಿಂತಿದ್ದ ಇನ್ನೊಂದು ಸ್ವೀಡಿಷ್ ಮೂಲದ ಎಇಡಬ್ಲ್ಯುಸಿ ಕೂಡ ಐಎಎಫ್ ದಾಳಿಯಿಂದ ನಾಶಗೊಂಡಿದೆ ಎಂದು ಹೇಳಲಾಗಿದೆ.
ಹಾನಿಗೀಡಾದ ಹ್ಯಾಂಗರ್‌ನಲ್ಲಿ ಇನ್ನಷ್ಟು ಯುದ್ಧವಿಮಾನಗಳಿದ್ದವು ಎಂದು ಶಂಕಿಸಲಾಗಿದ್ದರೂ ಪಾಕಿಸ್ತಾನವು ಸ್ಥಳದಿಂದ ಅವಶೇಷಗಳನ್ನು ತೆರವುಗೊಳಿಸಿಲ್ಲ,ಹೀಗಾಗಿ ಅಧಿಕಾರಿಗಳು ಅವುಗಳನ್ನು ದೃಢೀಕೃತ ಎಣಿಕೆಯಲ್ಲಿ ಸೇರಿಸಿಲ್ಲ.
ಈ ನಡುವೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಪಾಕಿಸ್ತಾನದ ಹಲವಾರು ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರಿಣಾಮಕಾರಿಯಾಗಿ ತಡೆದಿದ್ದವು. ಚೀನಿ ನಿರ್ಮಿತ ವಿಂಗ್ ಲೂಂಗ್ ಸೇರಿದಂತೆ ಹಲವಾರು ಪಾಕ್ ಡ್ರೋನ್‌ಗಳನ್ನು ಐಎಎಫ್ ಹೊಡೆದುರುಳಿಸಿದೆ.
ಭಾರತೀಯ ಸೇನೆಯು ಅಧಿಕೃತವಾಗಿ ಬಹಿರಂಗಗೊಳಿಸಿರುವ ಗುರಿಗಳನ್ನು ಹೊರತುಪಡಿಸಿ ಇನ್ನೂ ಏಳು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗಿದ್ದು,ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನವು ಆರೋಪಿಸಿದೆ. ಇದೊಂದು ‘ಅಪಪ್ರಚಾರ ತಂತ್ರ’ತಳ್ಳಿಹಾಕಿರುವ ಭಾರತೀಯ ಅಧಿಕಾರಿಗಳು,ಎಲ್ಲ ದಾಳಿಗಳು ಭಯೋತ್ಪಾದಕ ಮೂಲಸೌಕರ್ಯಗಳಿಗೆ ಸೀಮಿತವಾಗಿದ್ದವು. ನಾಗರಿಕರು ಅಥವಾ ಪಾಕಿಸ್ತಾನದ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.