‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯ ವೀಡಿಯೊ, ಚಿತ್ರಗಳನ್ನು ಬಿಡುಗಡೆ ಮಾಡಿದ ಸರಕಾರ
PC : NDTV
ಹೊಸದಿಲ್ಲಿ: ಭಾರತೀಯ ಸೇನೆಯು ಬುಧವಾರ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ ಗಂಟೆಗಳ ಬಳಿಕ, ಭಾರತ ಸರಕಾರವು ಈ ಕಾರ್ಯಾಚರಣೆಯ ವೀಡಿಯೊ ಮತ್ತು ಚಿತ್ರ ಪುರಾವೆಯನ್ನು ಹಂಚಿಕೊಂಡಿದೆ.
ಭಾರತವು ತನ್ನ ಪ್ರತಿಕ್ರಿಯಿಸುವ, ತಡೆಯುವ ಮತ್ತು ಮುಂದೆ ನಡೆಯಬಹುದಾದ ಪಹಲ್ಗಾಮ್ ನಂಥ ಸಂಭಾವ್ಯ ಗಡಿಯಾಚೆಗಿನ ದಾಳಿಗಳನ್ನು ನಿವಾರಿಸುವ ಹಕ್ಕನ್ನು ಚಲಾಯಿಸಿದೆ ಎಂದು ಸರಕಾರ ಹೇಳಿದೆ. ಭಯೋತ್ಪಾದನಾ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವ ಮತ್ತು ಭಯೋತ್ಪಾದಕರನ್ನು ನಿಗ್ರಹಿಸುವ ಗುರಿಯನ್ನು ಈ ಸೇನಾ ಕಾರ್ಯಾಚರಣೆ ಹೊಂದಿದೆ ಎಂದು ಅದು ತಿಳಿಸಿದೆ.
‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯ ಬಳಿಕ ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಲಾಗಿದೆ.
ಪಹಲ್ಗಾಮ್ ದಾಳಿ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೀಡಿರುವ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿದ ಮಿಸ್ರಿ, ‘‘ಭಯೋತ್ಪಾದನಾ ಕೃತ್ಯ ನಡೆಸಿದವರು, ಅದನ್ನು ಸಂಯೋಜಿಸಿದವರು, ಹಣಕಾಸು ಪೂರೈಸಿದವರು ಮತ್ತು ಅದನ್ನು ಪ್ರಾಯೋಜಿಸಿದವರನ್ನು ಉತ್ತರದಾಯಿಯಾಗಿಸುವ ಮತ್ತು ನ್ಯಾಯದ ಕಟಕಟೆಗೆ ತರುವ ಅಗತ್ಯವನ್ನು ಭದ್ರತಾ ಮಂಡಳಿ ಪ್ರತಿಪಾದಿಸಿದೆ’’ ಎಂದು ಹೇಳಿದರು.
‘‘ಭಾರತದ ಪ್ರಸಕ್ತ ಕಾರ್ಯಾಚರಣೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು’’ ಎಂದು ಮಿಸ್ರಿ ನುಡಿದರು.