‘ಆಪರೇಷನ್ ಸಿಂಧೂರ’ದಿಂದ ಆಗಿರುವ ಅವಮಾನ ಮುಚ್ಚಿಕೊಳ್ಳಲು ಶೆಲ್ ದಾಳಿ ಮುಂದುವರಿಸಿದ ಪಾಕ್ ; ಓರ್ವ ಭಾರತೀಯ ಯೋಧ ಹುತಾತ್ಮ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ‘ಆಪರೇಷನ್ ಸಿಂಧೂರ’ದ ಭಾರೀ ಹೊಡೆತದಿಂದ ತತ್ತರಿಸಿರುವ ಪಾಕಿಸ್ತಾನವು ತನಗಾಗಿರುವ ಅವಮಾನವನ್ನು ಮುಚ್ಚಿಕೊಳ್ಳಲು ಸತತ ಎರಡನೇ ದಿನವಾದ ಗುರುವಾರವೂ ಭಾರತದ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಶೆಲ್ ದಾಳಿಗಳನ್ನು ನಡೆಸಿದ್ದು,ಬುಧವಾರ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಯೋಧರೋರ್ವರು ಹುತಾತ್ಮರಾಗಿದ್ದಾರೆ.
ಹುತಾತ್ಮ ಲಾನ್ಸ್ ನಾಯ್ಕ್ ದಿನೇಶ್ ಕುಮಾರ್ ಅವರ ಅಂತ್ಯಸಂಸ್ಕಾರ ಗುರುವಾರ ಹರ್ಯಾಣದ ಅವರ ಸ್ವಗ್ರಾಮದಲ್ಲಿ ನಡೆಯಿತು.
ಪಾಕಿಸ್ತಾನವು ಗುರುವಾರ ಗಡಿಯಾಚೆಯಿಂದ ನಾಲ್ಕು ಪ್ರದೇಶಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿಗಳನ್ನು ನಡೆಸಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ ಸರಣಿ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದ ಬಳಿಕ ಅದು ಗಡಿಯಾಚೆಯಿಂದ ಅಪ್ರಚೋದಿತ ದಾಳಿಗಳ ದುಸ್ಸಾಹಸಕ್ಕೆ ಇಳಿದಿದೆ.
ಮೇ 7 ಮತ್ತು 8ರ ನಡುವಿನ ರಾತ್ರಿ ಪಾಕಿಸ್ತಾನಿ ಸೇನಾ ನೆಲೆಗಳು ಜಮ್ಮುಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ ಮತ್ತು ಅಖ್ನೂರ್‌ಗಳಿಗೆ ಎದುರಿನ ಪ್ರದೇಶಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಫಿರಂಗಿ ಬಂದೂಕುಗಳಿಂದ ಗುಂಡಿನ ದಾಳಿಯನ್ನು ನಡೆಸಿದ್ದು,ಭಾರತೀಯ ಸೇನೆಯು ಸೂಕ್ತ ಉತ್ತರವನ್ನು ನೀಡಿದೆ ಎಂದು ಸೇನಾಧಿಕಾರಿಯೋರ್ವರು ತಿಳಿಸಿದರು. ‘ಆಪರೇಷನ್ ಸಿಂಧೂರ’ದ ಬಳಿಕ ಪಾಕಿಸ್ತಾನವು ಶೆಲ್ ದಾಳಿಗಳನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಾಗರಿಕರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.
ಭಾರತೀಯ ಸೇನೆಯು ಲಾನ್ಸ್ ನಾಯ್ಕ್ ದಿನೇಶ್ ಕುಮಾರ್ ಅವರಿಗೆ ಗೌರವಗಳನ್ನು ಸಲ್ಲಿಸಿದೆ.
‘ಮೇ 7ರಂದು ಪಾಕಿಸ್ತಾನ ಸೇನೆಯಿಂದ ಶೆಲ್ ದಾಳಿಯ ಸಂದರ್ಭದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ 5 ಫೀಲ್ಡ್ ರೆಜಿಮೆಂಟ್‌ನ ಲಾನ್ಸ್ ನಾಯ್ಕ್ ದಿನೇಶ್ ಕುಮಾರ್ ಅವರಿಗೆ ನಾವು ನಮಿಸುತ್ತೇವೆ. ಪೂಂಚ್ ವಲಯದಲ್ಲಿ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆಯು ನಡೆಸಿದ ದಾಳಿಗಳ ಎಲ್ಲ ಸಂತ್ರಸ್ತರೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ’ ಎಂದು ವೈಟ್ ನೈಟ್ ಕಾರ್ಪ್ಸ್ ಟ್ವೀಟಿಸಿದೆ.
32ರ ಹರೆಯದ ದಿನೇಶ್ ಕುಮಾರ್ ಹರ್ಯಾಣದ ಪಲ್ವಾಲ್ ಜಿಲ್ಲೆಯವರಾಗಿದ್ದು 2014ರಲ್ಲಿ ಭಾರತೀಯ ಸೇನೆಯನ್ನು ಸೇರಿದ್ದರು.
‘ದಿನೇಶ ಇತರ ನಾಲ್ವರು ಯೋಧರೊಂದಿಗೆ ನಿಯಂತ್ರಣ ರೇಖೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾರ್ಟರ್ ಶೆಲ್ ದಾಳಿಯಿಂದಾಗಿ ಮೃತಪಟ್ಟಿದ್ದಾರೆಂದು ನಮಗೆ ಮಾಹಿತಿ ನೀಡಲಾಗಿದೆ. ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಮತ್ತು ಅವರ ತ್ಯಾಗವನ್ನು ನೆನಪಿಟ್ಟುಕೊಳ್ಳುತ್ತದೆ. ಅವರು ಕೆಚ್ಚೆದೆಯ ಯೋಧರಾಗಿದ್ದರು’ ಎಂದು ಹುತಾತ್ಮ ಯೋಧನ ತಂದೆ ದಯಾರಾಮ ಶರ್ಮಾ ಹೇಳಿದರು. ದಿನೇಶ್ ಕುಮಾರ್ ಅವರ ಇಬ್ಬರು ಸೋದರರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದಿನೇಶ್ ಕುಮಾರ್ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿರುವ ಹರ್ಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರು,ದೇಶದ ಪ್ರತಿಯೊಬ್ಬ ಪ್ರಜೆಯೂ ದಿನೇಶ್ ಕುಮಾರ್ ಅವರ ತ್ಯಾಗದ ಬಗ್ಗೆ ಹೆಮ್ಮೆಯನ್ನು ಹೊಂದಿದ್ದಾರೆ ಎಂದು ಟ್ವೀಟಿಸಿದ್ದಾರೆ.