ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಯ ಸೂತ್ರಧಾರ ಪರಾಗ್ ಜೈನ್ RAWದ ನೂತನ ಮುಖ್ಯಸ್ಥ
ಪರಾಗ್ ಜೈನ್ | PC : Credit: X/@manamuntu
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಹಿಂದಿದ್ದ ಸೂತ್ರಧಾರರ ಪೈಕಿ ಒಬ್ಬರಾದ ಪರಾಗ್ ಜೈನ್ ರನ್ನು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (RAW) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಪಂಜಾಬ್ ಕೇಡರ್ ನ 1989ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾದ ಪರಾಗ್ ಜೈನ್, ಜುಲೈ 1ರಿಂದ ಅಧಿಕೃತವಾಗಿ ತಮ್ಮ ಕಾರ್ಯಾರಂಭ ಮಾಡಲಿದ್ದಾರೆ. ಜೂನ್ 30ರಂದು ನಿವೃತ್ತರಾಗುತ್ತಿರುವ ರವಿ ಸಿನ್ಹಾರಿಂದ ಅವರು ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
ಪರಾಗ್ ಜೈನ್ ಅವರನ್ನು ಬಾಹ್ಯ ಬೇಹುಗಾರಿಕಾ ಸಂಸ್ಥೆಯಾದ ರಾ ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಧಾರವನ್ನು ಈ ವಾರದ ಆರಂಭದಲ್ಲಿ ಸಚಿವ ಸಂಪುಟದ ನೇಮಕಾತಿ ಸಮಿತಿ ಕೈಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ವಿಮಾನ ಯಾನ ನಿಗಾವಣೆ, SIGNT ಕಾರ್ಯಾಚರಣೆಗಳು, ಫೊಟೋ ವಿಚಕ್ಷಣಾ ವಿಮಾನಗಳು (PHOTINT), ಗಡಿಗಳ ನಿಗಾವಣೆ ಮತ್ತು ಛಾಯಾಚಿತ್ರ ಬೇಹುಗಾರಿಕೆಯನ್ನು ನಿರ್ವಹಿಸುವ ವಿಮಾನ ಯಾನ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಪರಾಗ್ ಜೈನ್ ಕಾರ್ಯನಿರ್ವಹಿಸಿದ್ದರು.
ಪರಾಗ್ ಜೈನ್ ಅವರು ಮಾನವ ಬುದ್ಧಿಮತ್ತೆ (HUMINT) ಹಾಗೂ ತಾಂತ್ರಿಕ ಬುದ್ಧಿಮತ್ತೆ (TECHINT) ಸಂಯೋಜನೆ ತಜ್ಞತೆಗೆ ಖ್ಯಾತರಾಗಿದ್ದು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ನಿಖರ ದಾಳಿ ನಡೆಸಲು ಅನುವಾಗುವಂತೆ ಭಾರತೀಯ ಸಶಸ್ತ್ರ ಪಡೆಗಳಿಗೆ ಗುಪ್ತಚರ ನೆರವು ಒದಗಿಸುವ ಮೂಲಕ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗುವಲ್ಲಿ ಪಾತ್ರ ವಹಿಸಿದ ಸೂತ್ರಧಾರಿ ಎಂಬ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.