×
Ad

ಪಹಲ್ಗಾಮ್ ನಲ್ಲಿ ಅಮಾಯಕರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಗೆ ‘ಆಪರೇಷನ್ ಸಿಂಧೂರ್’ ಭಾರತದ ಪ್ರತ್ಯುತ್ತರ: ಅಮಿತ್ ಶಾ

Update: 2025-05-07 11:40 IST

ಕೇಂದ್ರ ಗೃಹ ಸಚಿವ ಅಮಿತ್ ಶಾ (Photo: PTI)

ಹೊಸದಿಲ್ಲಿ: ಪಹಲ್ಗಾಮ್ ನಲ್ಲಿ ಅಮಾಯಕರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಗೆ ‘ಆಪರೇಷನ್ ಸಿಂಧೂರ್’ ಭಾರತದ ಪ್ರತ್ಯುತ್ತರ ಎಂದು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜೈಶೆ ಮುಹಮ್ಮದ್ ನ ಭದ್ರಕೋಟೆಯಾದ ಬಹವಲ್ಪುರ್ ಹಾಗೂ ಲಷ್ಕರೆ ತೈಬಾದ ನೆಲೆಯಾದ ಮುರಿದ್ಕೆ ಸೇರಿದಂತೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕರ ಗುರಿಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಕ್ಷಿಪಣಿ ದಾಳಿ ನಡೆಸಿದ ನಂತರ, ಅಮಿತ್ ಶಾರಿಂದ ಈ ಹೇಳಿಕೆ ಹೊರಬಿದ್ದಿದೆ. ಈ ಕ್ಷಿಪಣಿ ದಾಳಿಗೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಸಲಾಗಿದೆ.

ಭಾರತ ಮತ್ತು ಅದರ ಪ್ರಜೆಗಳ ಮೇಲೆ ನಡೆಯುವ ಯಾವುದೇ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಭಯೋತ್ಪಾದನೆಯನ್ನು ಬುಡಮಟ್ಟದಿಂದ ನಿರ್ಮೂಲನೆ ಮಾಡಲು ಕಟಿಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯಾಗುತ್ತಿದೆ. #OperationSindoor ಪಹಲ್ಗಾಮ್ ನಲ್ಲಿ ನಮ್ಮ ಅಮಾಯಕ ಸಹೋದರರನ್ನು ಭೀಕರವಾಗಿ ಹತ್ಯೆಗೈದಿದ್ದಕ್ಕೆ ಪ್ರತ್ಯುತ್ತರವಾಗಿದೆ” ಎಂದು ಹೇಳಿದ್ದಾರೆ.

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿಯನ್ನು ಬಲಿ ಪಡೆದ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಮಧ್ಯರಾತ್ರಿ ವೈಮಾನಿಕ ದಾಳಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News