×
Ad

ಆಪರೇಷನ್ ಸಿಂಧೂರ್ ಕೇವಲ ಕಾರ್ಯಾಚರಣೆಯಲ್ಲ; ಅದು ಬದಲಾಗುತ್ತಿರುವ ಭಾರತದ ದಿಕ್ಕು: ಪ್ರಧಾನಿ ಮೋದಿ

Update: 2025-05-25 19:31 IST

ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕೇವಲ ಸೇನಾ ಕಾರ್ಯಾಚರಣೆಯಲ್ಲ; ಅದೊಂದು ಬದಲಾಗುತ್ತಿರುವ ಭಾರತದ ದಿಕ್ಕು, ದೇಶದ ತೀರ್ಮಾನ, ಶೌರ್ಯ ಹಾಗೂ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಅದರ ಸಾಮರ್ಥ್ಯದ ಪ್ರತಿಫಲನವಾಗಿದೆ ಎಂದು ರವಿವಾರ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮವಾದ ‘ಮನ್ ಕಿ ಬಾತ್’ನ 121ನೇ ಆವೃತ್ತಿಯಲ್ಲಿ ರವಿವಾರ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಇಡೀ ದೇಶ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದ್ದು, ಅದರ ವಿರುದ್ಧ ಆಕ್ರೋಶ ಮತ್ತು ದೃಢ ನಿರ್ಧಾರದಿಂದ ತುಂಬಿದೆ” ಎಂದು ಹೇಳಿದರು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಒಂದು ತಿರುವಾಗಿದೆ ಎಂದು ಶ್ಲಾಘಿಸಿದ ಪ್ರಧಾನಿ, ಇದು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಭಾರತದ ಸಾಮರ್ಥ್ಯ ಹಾಗೂ ತನ್ನ ಉದ್ದೇಶದ ಕುರಿತು ಅದು ಹೊಂದಿರುವ ಸ್ಪಷ್ಟತೆಯ ಸಂಕೇತವಾಗಿದೆ ಎಂದು ಬಣ್ಣಿಸಿದರು.

“ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟಕ್ಕೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹೊಸ ಆತ್ಮವಿಶ್ವಾಸ ಹಾಗೂ ಚೈತನ್ಯವನ್ನು ತಂದಿದೆ” ಎಂದೂ ಅವರು ಹೇಳಿದರು.

ಗಡಿಗುಂಟ ಇರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನಾಪಡೆಗಳು ನಡೆಸಿದ ನಿಖರ ದಾಳಿಯನ್ನು ಅವರು ಅಸಾಧಾರಣ ಎಂದು ಕೊಂಡಾಡಿದರು.

ಆಪರೇಷನ್ ಸಿಂಧೂರ್ ಕೇವಲ ಸೇನಾ ಕಾರ್ಯಾಚರಣೆ ಮಾತ್ರವಲ್ಲ, ಅದು ಭಾರತದ ಪರಿವರ್ತನೆ ಮತ್ತು ದೃಢ ನಿರ್ಧಾರದ ಪ್ರತಿಫಲನ ಎಂದು ಅವರು ಅಭಿಪ್ರಾಯ ಪಟ್ಟರು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ, ದೇಶಾದ್ಯಂತ ‘ವೋಕಲ್ ಫಾರ್ ಲೋಕಲ್’ ಅಭಿಯಾನ ಹೊಸ ಚೈತನ್ಯ ಪಡೆದಿದ್ದು, ಈ ಕಾರ್ಯಾಚರಣೆಯು ಕೇವಲ ದೇಶ ಪ್ರೇಮವನ್ನು ಮಾತ್ರ ಪ್ರೇರೇಪಿಸಿಲ್ಲ; ಬದಲಿಗೆ, ಸ್ವಾವಲಂಬನೆಯ ಸ್ಫೂರ್ತಿಯನ್ನೂ ಬಲಿಷ್ಠಗೊಳಿಸಿದೆ ಎಂದೂ ಅವರು ಪ್ರತಿಪಾದಿಸಿದರು.

“ಈ ಗೆಲುವಿನ ಹಿಂದೆ ಅದಕ್ಕಾಗಿ ಕೊಡುಗೆ ನೀಡಿದ ಎಂಜಿನಿಯರ್ ಗಳು, ತಂತ್ರಜ್ಞರು ಹಾಗೂ ಪ್ರತಿ ಪ್ರಜೆಯ ಬೆವರ ಹನಿಯಿದೆ” ಎಂದು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News