ವಿಪಕ್ಷಗಳಿಂದ ಬಿಹಾರ ವಿಧಾನಸಭಾ ಚುನಾವಣೆ ಬಹಿಷ್ಕಾರ?: ಈ ಕುರಿತು ಚರ್ಚಿಸಲಾಗುವುದು ಎಂದ ತೇಜಸ್ವಿ ಯಾದವ್
PC : NDTV
ಹೊಸದಿಲ್ಲಿ: ಚುನಾವಣಾ ಆಯೋಗ ಆಡಳಿತಾರೂಢ ಬಿಜೆಪಿಯಿಂದ ಆದೇಶಗಳನ್ನು ಪಡೆಯುತ್ತಿದ್ದು, ಇಂತಹ ಸನ್ನಿವೇಶಗಳಲ್ಲಿ ಚುನಾವಣೆ ನಡೆಸುವುದು ಅರ್ಥಹೀನವಾಗಿದೆ ಎಂದು ಆರ್ ಜೆ ಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ವಿಪಕ್ಷಗಳೇನಾದರೂ ಚುನಾವಣಾ ಬಹಿಷ್ಕಾರವನ್ನು ಪರಿಗಣಿಸುತ್ತಿವೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಮಹಾ ಮೈತ್ರಿಯ ಅಂಗ ಪಕ್ಷಗಳೊಂದಿಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
"ಒಂದು ವೇಳೆ ಬಿಜೆಪಿಗೆ ನಕಲಿ ಮತದಾರರ ಪಟ್ಟಿಯ ಮೇಲೆ ಸರಕಾರ ನಡೆಸುವುದು ಬೇಕಿದ್ದರೆ, ಅವರಿಗೆ ಅವಕಾಶ ನೀಡಿ. ಇಡೀ ಪ್ರಕ್ರಿಯೆ ಅಪ್ರಾಮಾಣಿಕವಾಗಿರುವಾಗ, ಚುನಾವಣೆಗಳನ್ನು ನಡೆಸುವುದರಲ್ಲಿ ಯಾವ ಅರ್ಥವಿದೆ?" ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
"ಬಹಿಷ್ಕಾರ ಒಂದು ಆಯ್ಕೆಯಾಗಿದೆ. ನಾನು ನಮ್ಮ ಮೈತ್ರಿ ಪಕ್ಷಗಳೊಂದಿಗೆ ಸಮಾಲೋಚಿಸಿ ಒಂದು ನಿರ್ಧಾರಕ್ಕೆ ಬಂದ ನಂತರ, ಈ ಕುರಿತು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು" ಎಂದು ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಲಿವೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.