×
Ad

ದೇಶವ್ಯಾಪಿ ಜಾತಿ ಸಮೀಕ್ಷೆ ನಡೆಸಲು ಪ್ರತಿಪಕ್ಷಗಳ ಕರೆ

Update: 2023-10-03 21:24 IST

ಹೊಸದಿಲ್ಲಿ : ಬಿಹಾರ ಸರಕಾರ ನಡೆಸಿರುವ ಜಾತಿ ಗಣತಿಯನ್ನು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಆಪ್)ಗಳು ಸೋಮವಾರ ಸ್ವಾಗತಿಸಿವೆ ಹಾಗೂ ಈ ಕಸರತ್ತನ್ನು ಭಾರತದಾದ್ಯಂತ ನಡೆಸಲು ಕರೆ ನೀಡಿವೆ.

ಬಿಹಾರ ಸರಕಾರವು ಈ ವರ್ಷದ ಜನವರಿಯಲ್ಲಿ ಜಾತಿ ಗಣತಿಗೆ ಚಾಲನೆ ನೀಡಿತ್ತು. ಸೋಮವಾರ ಅದು ವರದಿಯನ್ನು ಬಿಡುಗಡೆಗೊಳಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಇತರ ಸಮುದಾಯಗಳ ಜಾತಿವಾರು ದತ್ತಾಂಶವನ್ನು ಸಂಗ್ರಹಿಸುವುದಿಲ್ಲ ಎಂಬುದಾಗಿ ಕೇಂದ್ರ ಸರಕಾರ ಹೇಳಿದ ಬಳಿಕ ಬಿಹಾರ ಸರಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸಿತ್ತು.

ಬಿಹಾರದ ಒಟ್ಟು ಜನಸಂಖ್ಯೆ 13.07 ಕೋಟಿಯಲ್ಲಿ, ಅತ್ಯಂತ ಹಿಂದುಳಿದ ವರ್ಗಗಳ ಪ್ರಮಾಣ 36% ಮತ್ತು ಇತರ ಹಿಂದುಳಿದ ವರ್ಗಗಳ ಪ್ರಮಾಣ 27.13% ಎಂಬುದಾಗಿ ಸಮೀಕ್ಷೆ ಹೇಳಿದೆ.

ಜಾತಿ ಸಮೀಕ್ಷೆಯು ಇತರ ಹಿಂದುಳಿದ ವರ್ಗಗಳು ಮತ್ತು ಇತರ ಜಾತಿಗಳ ನಿಜವಾದ ಜನಸಂಖ್ಯೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಹಾಗೂ ಆ ಮೂಲಕ ಯೋಜನೆಗಳನ್ನು ಸಮರ್ಥವಾಗಿ ಮತ್ತು ನ್ಯಾಯೋಚಿತವಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಬಿಹಾರ ಸರಕಾರ ಅಭಿಪ್ರಾಯಪಟ್ಟಿದೆ. ಬಿಹಾರ ಸರಕಾರವನ್ನು ಸಂಯುಕ್ತ ಜನತಾ ದಳ, ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟವು ನಡೆಸುತ್ತಿದೆ.

ಬಿಹಾರ ಸರಕಾರವು ವರದಿಯನ್ನು ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಕೇಂದ್ರ ಸರಕಾರವು ರಾಷ್ಟ್ರೀಯ ಜಾತಿ ಗಣತಿಯೊಂದನ್ನು ನಡೆಸಬೇಕೆಂಬ ತನ್ನ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಿದರು.

“ವಾಸ್ತವವಾಗಿ, ಯುಪಿಎ-2 ಸರಕಾರವು ಜಾತಿ ಗಣತಿಯನ್ನು ನಡೆಸಿದೆ. ಆದರೆ ಅದರ ವರದಿಯನ್ನು ಮೋದಿ ಸರಕಾರವು ಬಿಡುಗಡೆಗೊಳಿಸುತ್ತಿಲ್ಲ’’ ಎಂದು ರಮೇಶ್ ‘x’ನಲ್ಲಿ ಬರೆದಿದ್ದಾರೆ. ‘‘ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳಿಗೆ ಉತ್ತಮ ಅಡಿಪಾಯ ಹಾಕಲು ಮತ್ತು ಸಾಮಾಜಿಕ ನ್ಯಾಯಕ್ಕೆ ಬಲ ನೀಡಲು ಇಂಥ ಗಣತಿಯು ಅಗತ್ಯವಾಗಿದೆ’’ ಎಂದು ಅವರು ಹೇಳಿದ್ದಾರೆ.

ಶೋಷಿತ ಜನರ ಕೊರತೆಗಳನ್ನು ನಿಖರವಾಗಿ ಅರಿತುಕೊಂಡು ನೀತಿಗಳನ್ನು ರೂಪಿಸಲು ಜಾತಿ ಗಣತಿಯ ಅಂಕಿಅಂಶಗಳು ಸರಕಾರಕ್ಕೆ ನೆರವಾಗಲಿವೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.

ನುಣುಚಿಕೊಳ್ಳುತ್ತಿರುವ ಮೋದಿ: ಆಪ್

ಬಿಹಾರದಲ್ಲಿ ನಡೆದ ಜಾತಿ ಗಣತಿಯನ್ನು ರಾಷ್ಟ್ರ ವ್ಯಾಪಿ ನಡೆಸುವುದರಿಂದ ಪ್ರಧಾನಿ ನರೇಂದ್ರ ಮೋದಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

‘‘ಅವರು ಯಾವಾಗಲೂ ಒಬಿಸಿ, ದಲಿತ, ಬುಡಕಟ್ಟು ಮತ್ತು ಶೋಷಿತರ ವಿರೋಧಿಯಾಗಿದ್ದಾರೆ’’ ಎಂದು ಬಿಜೆಪಿ ಸರಕಾರವನ್ನು ಉದ್ದೇಶಿಸುತ್ತಾ ಅವರು ಹೇಳಿದರು. ‘‘ಹಾಗಾಗಿಯೇ ಅವರು ಇದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿರುವ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ನೀವು ಬಯಸಿರುವುದಾದರೆ, ನೀವು ಜಾತಿ ಗಣತಿ ನಡೆಸಲೇಬೇಕು’’ ಎಂದು ಅವರು ನುಡಿದರು.

ಕೇಂದ್ರ ಸರಕಾರದಲ್ಲಿ ಒಬಿಸಿ ಕಾರ್ಯದರ್ಶಿಗಳು 3 ಮಾತ್ರ: ರಾಹುಲ್ ಗಾಂಧಿ

ಜನಸಂಖ್ಯೆಯಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಒಟ್ಟು ಪ್ರಮಾಣ 84 ಶೇಕಡ ಆಗಿದ್ದರೂ, ಕೇಂದ್ರ ಸರಕಾರದಲ್ಲಿರುವ ಒಟ್ಟು 90 ಕಾರ್ಯದರ್ಶಿಗಳ ಪೈಕಿ ಒಬಿಸಿಗೆ ಸೇರಿದವರು ಕೇವಲ ಮೂರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಟ್ಟು ಮಾಡಿದ್ದಾರೆ.

‘‘ಹಾಗಾಗಿ, ಭಾರತದ ಜಾತಿ ಅಂಕಿಸಂಖ್ಯೆಗಳನ್ನು ತಿಳಿಯುವುದು ಅಗತ್ಯವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಹಕ್ಕುಗಳೂ ಹೆಚ್ಚಬೇಕು. ಇದು ನಮ್ಮ ಪ್ರತಿಜ್ಞೆ’’ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News