×
Ad

ಸ್ಪೇನ್ ನಲ್ಲಿ ಕಳ್ಳರ ಕೈಚಳಕ: ಅಮೂಲ್ಯ ಸೊತ್ತುಗಳನ್ನು ಕಳೆದುಕೊಂಡ ಭಾರತೀಯ ಚೆಸ್ ಆಟಗಾರರು

Update: 2023-12-26 16:26 IST

Photo : twitter

ಹೊಸದಿಲ್ಲಿ: ಸನ್ವೇ ಸಿಟ್ಜೆಸ್ ಚೆಸ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಸ್ಪೇನ್ ನ ಕರಾವಳಿನಗರ ಸಿಟ್ಜೆಸ್ ನಲ್ಲಿದ್ದ ಆರು ಭಾರತೀಯ ಚೆಸ್ ಆಟಗಾರರು ತಾವು ತಂಗಿದ್ದ ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದ ಕಳ್ಳರ ಕೈಚಳಕದಿಂದಾಗಿ ಲ್ಯಾಪ್ಟಾಪ್ ಗಳು, ನಗದು, ವಿದ್ಯುನ್ಮಾನ ಸಾಧನಗಳು ಮತ್ತು ಪಾಸ್ಪೋರ್ಟ್ ಸಹ ಸೇರಿದಂತೆ ತಮ್ಮ ಅಮೂಲ್ಯ ಸೊತ್ತುಗಳನ್ನು ಕಳೆದುಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.

70ಕ್ಕೂ ಅಧಿಕ ಭಾರತೀಯ ಆಟಗಾರರ ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪೈಕಿ ಗ್ರ್ಯಾಂಡ್ ಮಾಸ್ಟರ್ ಸಂಕಲ್ಪ ಗುಪ್ತಾ, ಇಂಟರ್ನ್ಯಾಷನಲ್ ಮಾಸ್ಟರ್ ದುಷ್ಯಂತ್ ಶರ್ಮಾ,‌ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಶೀಜಾ ಶೇಷಾದ್ರಿ, ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್‌ಗಳಾದ ಮೌನಿಕಾ ಅಕ್ಷಯ ಮತ್ತು ಅರ್ಪಿತಾ ಮುಖರ್ಜಿ ಹಾಗೂ ಮಹಿಳಾ ಫಿಡೆ ಮಾಸ್ಟರ್ ವಿಶ್ವಾ ಶಾ ಅವರು ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ತಮ್ಮ ಸೊತ್ತುಗಳನ್ನು ಕಳೆದುಕೊಂಡಿದ್ದಾರೆ.

ಈ ತಿಂಗಳ 19ರಂದು ಸಂಕಲ್ಪ ಗುಪ್ತಾ ಮತ್ತು ದುಷ್ಯಂತ ಶರ್ಮಾ ತಂಗಿದ್ದ ಕೋಣೆಗೆ ಕಳ್ಳರು ನುಗ್ಗಿದ್ದರೆ, ಮೂರು ದಿನಗಳ ಬಳಿಕ ಕೆಲವೇ ಗಂಟೆಗಳ ಅಂತರದಲ್ಲಿ ಮೌನಿಕಾ ಅಕ್ಷಯ ಮತ್ತು ಇತರ ನಾಲ್ವರು ಆಟಗಾರರು ಹಂಚಿಕೊಂಡಿದ್ದ ಅಪಾರ್ಟ್ಮೆಂಟ್ ನಲ್ಲಿ ಮತ್ತು ಅರ್ಪಿತಾ ಮುಖರ್ಜಿ ಮತ್ತು ವಿಶ್ವಾ ಶಾ ಉಳಿದುಕೊಂಡಿದ್ದ ಅಪಾರ್ಟ್ಮೆಂಟ್ ನಲ್ಲಿ ಕಳ್ಳತನಗಳು ನಡೆದಿದ್ದವು.

ಈ ಮೂರೂ ಅಪಾರ್ಟ್ಮೆಂಟ್ ಗಳು ಪಂದ್ಯಾವಳಿಯ ಆಯೋಜಕರು ಭಾರತೀಯ ಆಟಗಾರರಿಗಾಗಿ ವ್ಯವಸ್ಥೆ ಮಾಡಿದ್ದ ಅಧಿಕೃತ ವಸತಿ ಕಟ್ಟಡಗಳಲ್ಲಿದ್ದು, ಪಂದ್ಯಾವಳಿ ನಡೆಯುತ್ತಿರುವ ತಾಣದಿಂದ ಎರಡು ಕಿ.ಮೀ.ಅಂತರದೊಳಗೇ ಇವೆ. ತಮ್ಮ ಸೊತ್ತುಗಳು ಕಳ್ಳತನವಾಗಿರುವ ಬಗ್ಗೆ ಇತರ ಯಾವುದೇ ದೇಶದ ಆಟಗಾರರು ಈವರೆಗೆ ದೂರಿಕೊಂಡಿಲ್ಲ.

ದುಷ್ಯಂತ್ ಶರ್ಮಾ ಅವರ ಪಾಸ್ಪೋರ್ಟ್ ಅನ್ನೂ ಕಳ್ಳರು ಬಿಟ್ಟಿಲ್ಲ. ಭಾರತಕ್ಕೆ ಮರಳಲು ದಾಖಲಾತಿಗಳನ್ನು ಮಾಡಿಸಿಕೊಳ್ಳಲು ಭಾರತೀಯ ದೂತಾವಾಸಕ್ಕೆ ತೆರಳಬೇಕಿದ್ದರಿಂದ ಅವರು ಪಂದ್ಯಾವಳಿಯಿಂದ ಹೊರಗುಳಿಯುವಂತಾಗಿತ್ತು.

‘ಇದು ತುಂಬ ವಿಲಕ್ಷಣವಾಗಿದೆ. ನನ್ನ ಏರ್ಪಾಡ್ ಗಳನ್ನು ಕದ್ದ ಕಳ್ಳರು ದುಷ್ಯಂತರ ಏರ್ಪಾಡ್ ಗಳನ್ನು ಬಿಟ್ಟಿದ್ದಾರೆ. ಅವರ ಪಾಸ್ಪೋರ್ಟ್ ಕದ್ದ ಕಳ್ಳರು ನನ್ನ ಪಾಸ್ಪೋರ್ಟ್ ಉಳಿಸಿದ್ದಾರೆ. ನನ್ನ ಏರ್ಪಾಡ್ ಗಳಿರುವ ಸ್ಥಳವನ್ನು ನಾನು ಈಗಲೂ ಟ್ರ್ಯಾಕ್ ಮಾಡಬಲ್ಲೆ, ಕಳೆದ ಮೂರು ದಿನಗಳಿಂದ ಅವು ಒಂದೇ ಸ್ಥಳದಲ್ಲಿವೆ. ಅವು ನಿಖರವಾಗಿ ಬಾರ್ಸಿಲೋನಾದಲ್ಲಿಯ ಲಾ ಮಿನಾ ಪ್ರದೇಶದಲ್ಲಿವೆ ಎನ್ನುವುದು ನನಗೆ ಗೊತ್ತು. ನಾನು ಈ ವಿಷಯವನ್ನು ಪೋಲಿಸರಿಗೆ ತಿಳಿಸಿದ್ದೆ. ಅವುಗಳನ್ನು ಮರಳಿ ಪಡೆಯಲು ನಾನೇ ಅಲ್ಲಿಗೆ ಹೋಗಲೇ ಎಂದೂ ಕೇಳಿದ್ದೆ. ಅದು ಬಾರ್ಸಿಲೋನಾದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲೊಂದಾಗಿದೆ ಎಂದು ನಮಗೆ ತಿಳಿಸಿದ ಪೋಲಿಸರು ನಾವು ಅಲ್ಲಿಗೆ ಹೋಗುವುದನ್ನು ತಡೆದರು’ ಎಂದು ಸಂಕಲ್ಪ ಗುಪ್ತಾ ಸುದ್ದಿಸಂಸ್ಥೆಗೆ ತಿಳಿಸಿದರು.

ಪಂದ್ಯಾವಳಿಯ ಆಯೋಜಕರು ಹೇಳಿಕೆಯೊಂದರಲ್ಲಿ ಸೊತ್ತುಗಳನ್ನು ಕಳೆದುಕೊಂಡ ಆಟಗಾರರ ಬಗ್ಗೆ ಸಹಾನುಭೂತಿ ತೋರಿಸಿದ್ದಾರಾದರೂ ದೋಷವನ್ನು ಆಟಗಾರರ ಮೇಲೆಯೇ ಹೊರಿಸುವ ಪರೋಕ್ಷ ಪ್ರಯತ್ನವನ್ನೂ ಮಾಡಿದ್ದಾರೆ. ಆಟಗಾರರು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿಲ್ಲದಿರಬಹುದು ಎಂದಿದ್ದಾರೆ. ಆದರೆ ಆಟಗಾರರು ಇದನ್ನು ಅಲ್ಲಗಳೆದಿದ್ದಾರೆ.

ಪೋಲಿಸ್ ದೂರನ್ನು ಸಲ್ಲಿಸಲು ಆಯೋಜಕರು ಆಟಗಾರರಿಗೆ ನೆರವಾಗಿದ್ದರಾದರೂ,ಇದರಿಂದ ಏನೂ ಉಪಯೋಗವಿಲ್ಲ ಎಂದು ಪೋಲಿಸರು ಆಟಗಾರರಿಗೆ ಹೇಳಿದ್ದಾರೆ.

ಇಡೀ ಪ್ರದೇಶದ ಗಸ್ತು ನಿರ್ವಹಿಸಲು ಏಕೈಕ ಸೆಕ್ಯೂರಿಟಿ ಗಾರ್ಡ್ ಅನ್ನು ನೇಮಿಸಲಾಗಿತ್ತು ಮತ್ತು ಕನಿಷ್ಠ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದವು ಎಂದು ಆಟಗಾರರು ಹೇಳಿದ್ದಾರೆ.

‘ನಾವು ಕಳೆದುಕೊಂಡ ಸೊತ್ತುಗಳಿಗೆ ಪರಿಹಾರ ನೀಡುವಂತೆ ಕೇಳಿಕೊಂಡಾಗ ಆಯೋಜಕರು ನಮ್ಮನ್ನು ತಮಾಷೆ ಮಾಡಿದ್ದರು. ಊಟವನ್ನು ಒದಗಿಸುವ ಮೂಲಕ ಪರಿಹಾರವನ್ನು ನೀಡುವುದಾಗಿ ಗೇಲಿ ಮಾಡಿದ್ದರು’ ಎಂದು ಮೌನಿಕಾ ಅಕ್ಷಯ ಹೇಳಿದರು.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News