×
Ad

ಪಶ್ಚಿಮ ಬಂಗಾಳ | ಸ್ನೇಹಿತನೊಂದಿಗೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ಕಾಲೇಜಿನ ಬಳಿಯೇ ನಡೆದ ಘಟನೆ

Update: 2025-10-11 19:37 IST

ಸಾಂದರ್ಭಿಕ ಚಿತ್ರ (Photo: PTI)

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜಿನ ಬಳಿ ಎರಡನೆ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಂತ್ರಸ್ತ ವಿದ್ಯಾರ್ಥಿನಿಯನ್ನು ದುರ್ಗಾಪುರದ ಶಿವಪುರ್ ಪ್ರದೇಶದಲ್ಲಿರುವ ಐಕ್ಯೂ ಸಿಟಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಒಡಿಶಾದ ಜಲೇಶ್ವರ್ ನಿವಾಸಿ ಎಂದು ಗುರುತಿಸಲಾಗಿದ್ದು, ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಗೆ ಆಕೆ ತನ್ನ ಗೆಳೆಯನೊಬ್ಬನೊಂದಿಗೆ ಹೊರಗೆ ತಿರುಗಾಡಲು ತೆರಳಿದ್ದಾಗ, ಕೆಲವು ಯುವಕರು ಅವರನ್ನು ಕಾಲೇಜಿನ ದ್ವಾರದ ಬಳಿ ಅಡ್ಡಗಟ್ಟಿದ್ದಾರೆ ಎಂದು ಹೇಳಲಾಗಿದೆ.

ಬಳಿಕ, ಮರಗಳಿಂದ ಸುತ್ತುವರಿದಿರುವ ಪ್ರದೇಶಕ್ಕೆ ಆ ಯುವತಿಯನ್ನು ಎಳೆದೊಯ್ದಿರುವ ದುಷ್ಕರ್ಮಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿಯ ಸ್ನೇಹಿತನು ಸ್ಥಳದಿಂದ ಪರಾರಿಯಾಗಿದ್ದು, ಈ ಘಟನೆಯಲ್ಲಿ ಆತನೂ ಭಾಗಿಯಾಗಿರಬಹುದು ಎಂದು ನಮ್ಮ ಕುಟುಂಬ ಶಂಕಿಸಿದೆ ಎಂದು ಸಂತ್ರಸ್ತ ಯುವತಿಯ ತಂದೆ ಹೇಳಿದ್ದಾರೆ.

ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ತ ಯುವತಿಯ ತಂದೆ, ನನ್ನ ಪುತ್ರಿಯ ಗೆಳೆಯನು ಆಕೆಯನ್ನು ದಾರಿ ತಪ್ಪಿಸಿದ್ದು, ಆಕೆಯನ್ನು ಸುಳ್ಳು ಸೋಗಿನೊಂದಿಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾರೆ. ದಾಳಿಕೋರರು ನನ್ನ ಪುತ್ರಿಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿದ್ದು, ಆಕೆಯ ಬಳಿಯಿದ್ದ 5,000 ರೂ. ಅನ್ನೂ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದೂ ಆಪಾದಿಸಿದ್ದಾರೆ.

ಘಟನೆಯ ಬಳಿಕ ಯುವತಿಯನ್ನು ದುರ್ಗಾಪುರದಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಈ ಸಂಬಂಧ ತನಿಖೆ ಕೈಗೊಳ್ಳ ಲಾಗಿದ್ದು, ಸಂತ್ರಸ್ತ ಯುವತಿಯ ಗೆಳೆಯ ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ. ಸಂತ್ರಸ್ತ ಯುವತಿಯ ಹೇಳಿಕೆಯನ್ನೂ ದಾಖಲಿಸಿಕೊಳ್ಳದಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರಕಾರ ತೀವ್ರ ಟೀಕೆಗೆ ಗುರಿಯಾಗಿದೆ. ಇದಕ್ಕೂ ಮುನ್ನ, ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ತರಬೇತಿ ನಿರತ ಸ್ನಾತಕೋತ್ತರ ಪದವಿ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿನ ಸೌತ್ ಕಲ್ಕತ್ತಾ ಲಾ ಕಾಲೇಜಿನ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಿಂದ ತೃಣಮೂಲ ಕಾಂಗ್ರೆಸ್ ಸರಕಾರ ತೀವ್ರ ಮುಜುಗರಕ್ಕೀಡಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News