×
Ad

ನಾಲ್ವರು ಎಸ್ಎಯು ಪ್ರಾಧ್ಯಾಪಕರ ಅಮಾನತು ಹಿಂಪಡೆಯಲು SAARC ಗೆ ದೇಶವಿದೇಶಗಳ 500ಕ್ಕೂ ಅಧಿಕ ಶಿಕ್ಷಣತಜ್ಞರ ಆಗ್ರಹ

Update: 2023-07-09 19:03 IST

SAU | Photo : PTI 

ಹೊಸದಿಲ್ಲಿ: ದಿಲ್ಲಿಯ ಸೌಥ್ ಏಶ್ಯನ್ ವಿವಿ (SAU)ಯಿಂದ ನಾಲ್ವರು ಪ್ರಾಧ್ಯಾಪಕರ ಅಮಾನತನ್ನು ಹಿಂದೆಗೆದುಕೊಳ್ಳುವಂತೆ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ಗಳಲ್ಲಿಯ ವಿವಿಗಳ 500ಕ್ಕೂ ಅಧಿಕ ಶಿಕ್ಷಣತಜ್ಞರು ದಕ್ಷಿಣ ಏಶ್ಯಾ ಪ್ರಾದೇಶಿಕ ಸಹಕಾರ ಸಂಘ ಅಥವಾ ಸಾರ್ಕ್ (SAARC) ವಿದೇಶಾಂಗ ಸಚಿವರನ್ನು ಆಗ್ರಹಿಸಿದ್ದಾರೆ.

ಎಸ್ಎಯು ಎಂಟು ಸಾರ್ಕ್ ಸದಸ್ಯ ದೇಶಗಳು ಸ್ಥಾಪಿಸಿರುವ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯವಾಗಿದೆ.

ಪ್ರಾಧ್ಯಾಪಕರಾದ ಸ್ನೇಹಶಿಷ್ ಭಟ್ಟಾಚಾರ್ಯ, ಶ್ರಿನಿವಾಸ ಬುರ್ರಾ, ಇರ್ಫಾನುಲ್ಲಾ ಫಾರೂಕಿ ಮತ್ತು ರವಿಕುಮಾರ ಅವರನ್ನು ಜೂ.16ರಂದು ಅಮಾನತುಗೊಳಿಸಲಾಗಿದೆ. ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಮಾಸಿಕ ಸ್ಟೈಫಂಡ್ ಅನ್ನು 5,000 ರೂ.ಗಳಿಂದ 3,000 ರೂ.ಗಳಿಗೆ ತಗ್ಗಿಸಿದ ಬಳಿಕ ತಿಂಗಳು ಕಾಲ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪ್ರಚೋದಿಸಿದ್ದ ಆರೋಪದಲ್ಲಿ ಈ ಅಮಾನತುಗಳನ್ನು ಮಾಡಲಾಗಿದೆ. ವಿವಿಯು ತನ್ನ ನಿರ್ಧಾರವನ್ನು ಹಿಂದೆಗೆದುಕೊಂಡಿತ್ತಾದರೂ ಮಾಸಿಕ ಸ್ಟೈಫಂಡ್ ನ್ನು 9,000 ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದರು.

ನ.4ರಂದು ವಿವಿಯು ಐವರು ವಿದ್ಯಾರ್ಥಿಗಳನ್ನು ಉಚ್ಚಾಟಿಸಿತ್ತು ಮತ್ತು ಇದು ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಸಾಮೂಹಿಕ ಉಪವಾಸ ಮುಷ್ಕರಕ್ಕೆ ನಾಂದಿ ಹಾಡಿತ್ತು. ಡಿಸೆಂಬರ್ನಲ್ಲಿ ರಜೆಯನ್ನು ಘೋಷಿಸಿದ ಬಳಿಕ ಪ್ರತಿಭಟನೆಯು ಅಂತ್ಯಗೊಂಡಿತ್ತು, ಬಳಿಕ ಅಧ್ಯಾಪಕರಿಗೆ ಶೋಕಾಸ್ ನೋಟಿಸ್ ಗಳನ್ನು ನೀಡಲಾಗಿತ್ತು.

ನ್ಯಾಯಯುತವಲ್ಲದ ಮತ್ತು ನಿರಂಕುಶ ಅಮಾನತು ಆದೇಶಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಮತ್ತು ಕ್ಯಾಂಪಸ್ ನಲ್ಲಿ ಹಿತಕರ ವಾತಾವರಣವನ್ನು ಸ್ಥಾಪಿಸುವಂತೆ ಶಿಕ್ಷಣತಜ್ಞರು ತಮ್ಮ ಪತ್ರದಲ್ಲಿ ಎಸ್ಎಯು ಆಡಳಿತವನ್ನು ಆಗ್ರಹಿಸಿದ್ದಾರೆ.

ಪ್ರಾಧ್ಯಾಪಕರ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳು ಭಾರತೀಯ ಶಿಕ್ಷಣ ವ್ಯವಸ್ಥೆಯ ವಿಶಿಷ್ಟ ಲಕ್ಷಣಗಳಾಗಿರುವ ಮುಕ್ತತೆ,ಸಂವಾದ ಮತ್ತು ಪರಸ್ಪರತೆಯ ಸಂಪ್ರದಾಯಗಳಿಗೆ ವಿರುದ್ಧವಾಗಿವೆ ಎಂದು ಹೇಳಿರುವ ಶಿಕ್ಷಣತಜ್ಞರು, ಅವು ವಿದ್ಯಾರ್ಥಿಗಳ ಪರವಾಗಿ ಮಾತನಾಡಲು ಹಾಗೂ ವಿದ್ಯಾರ್ಥಿಗಳ ಹಿತಚಿಂತನೆ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸುರಕ್ಷಿತ ಮತ್ತು ಪೂರಕ ಕಲಿಕೆಯ ವಾತಾವರಣವನ್ನು ಖಚಿತಪಡಿಸಲು ಪ್ರಾಧ್ಯಾಪಕರ ಬಾಧ್ಯತೆಗಳಿಗೂ ವಿರುದ್ಧವಾಗಿದೆ ಎಂದಿದ್ದಾರೆ.

ಪ್ರಾಧ್ಯಾಪಕರ ವಿರುದ್ಧದ ನಿರಂಕುಶ ಕ್ರಮವು ಶಿಕ್ಷಣ ಸಂಸ್ಥೆಗಳ ಉತ್ತರದಾಯಿತ್ವ, ಪಾರದರ್ಶಕತೆ, ಸಮಗ್ರತೆ ಮತ್ತು ಸುಸ್ಥಿರತೆಯ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದೂ ಅವರು ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ.

ಪತ್ರಕ್ಕೆ ಸಹಿ ಹಾಕಿದವರಲ್ಲಿ ಜೆಎನ್ಯು,ದಿಲ್ಲಿ ವಿವಿ,ಇಂಡಿಯನ್  ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಷನ್ ಆ್ಯಂಡ್ ರೀಸರ್ಚ್ (ಕೋಲ್ಕತಾ), ಅಲಿಗಡ ಮುಸ್ಲಿಮ್ ವಿವಿ ಹಾಗೂ ಪ್ರಿನ್ಸ್ಟನ್ ವಿವಿ,ಕೊಲಂಬಿಯಾ ವಿವಿ, ಕ್ಯಾಲಿಫೋರ್ನಿಯಾ ವಿವಿ, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಮತ್ತು ಎಸ್ಒಎಎಸ್ ಯುನಿವರ್ಸಿಟಿ ಆಫ್ ಲಂಡನ್  ನಂತಹ ವಿದೇಶಿ ವಿವಿಗಳ ಶಿಕ್ಷಣತಜ್ಞರು ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News