"ನ್ಯಾಯಾಲಯದಂತೆ ವರ್ತಿಸುತ್ತಿದೆ"; ಚುನಾವಣಾ ಆಯೋಗಕ್ಕೆ ಪಿ.ಚಿದಂಬರಂ ತರಾಟೆ
ಪಿ.ಚಿದಂಬರಂ (Photo: PTI)
ಹೊಸದಿಲ್ಲಿ, ಆ.11: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿರುವ ‘ಮತಗಳ ಕಳ್ಳತನ’ ಆರೋಪಗಳ ನಡುವೆಯೇ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಭಾರತೀಯ ಚುನಾವಣಾ ಆಯೋಗ (ಇಸಿಐ)ದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ಈ ಕುರಿತು ರವಿವಾರ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಚಿದಂಬರಂ, "ಚುನಾವಣಾ ಆಯೋಗವು ನ್ಯಾಯಾಲಯದಂತೆ ವರ್ತಿಸುತ್ತಿದೆ, ಚುನಾವಣಾ ಆಯೋಗವು ನ್ಯಾಯಾಲಯವಲ್ಲ. ಅರ್ಜಿ ಅಥವಾ ದೂರುಗಳನ್ನು ಸ್ವೀಕರಿಸುವಾಗ ಆಯೋಗವು ನ್ಯಾಯಾಲಯದಂತೆ ವರ್ತಿಸಬಾರದು. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಆಡಳಿತಾತ್ಮಕ ಸಂಸ್ಥೆಯಾಗಿರುವುದು ಆಯೋಗದ ಕರ್ತವ್ಯ,” ಎಂದರು.
ಅವರು ನಿಯಮ 20(3)(b) ಕುರಿತು ಸ್ಪಷ್ಟನೆ ನೀಡುತ್ತಾ, “ಈ ನಿಯಮವು ಕೇವಲ ಮತದಾರರ ಪಟ್ಟಿಯಲ್ಲಿ ಸೇರಿಸಲು ಸಲ್ಲಿಸಿದ ಹಕ್ಕನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರಿಯ ನಿರ್ದಿಷ್ಟ ನಿರ್ಧಾರದ ಸಂದರ್ಭಕ್ಕೆ ಮಾತ್ರ ಅನ್ವಯಿಸುತ್ತದೆ. ಇಡೀ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಭ್ರಷ್ಟಾಚಾರದ ದೊಡ್ಡ ಮಟ್ಟದ ಆರೋಪ ಬಂದಾಗ, ಈ ನಿಯಮ ಅನ್ವಯಿಸುವುದಿಲ್ಲ,” ಎಂದು ಪಿ ಚಿದಂಬರಂ ತಿಳಿಸಿದರು.
ದಿ ಹಿಂದೂ ವರದಿಯನ್ನು ಉಲ್ಲೇಖಿಸಿದ ಚಿದಂಬರಂ, ಬಿಹಾರದ ಬೂತ್ ಲೆವೆಲ್ ಏಜೆಂಟ್‌ಗಳಿಂದ ಬಂದ ದೂರುಗಳನ್ನು ಚುನಾವಣಾ ಆಯೋಗ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು. “ಎಸ್ ಐಆರ್ ಮತ್ತು ದೂರುಗಳನ್ನು ಸ್ವೀಕರಿಸುತ್ತಿಲ್ಲ ಎನ್ನುವ ಆರೋಪ ನಿಜವಾಗಿದ್ದರೆ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಅಂತ್ಯಕ್ಕೆ ಕಾರಣವಾಗುತ್ತಿದೆ” ಎಂದು ಎಚ್ಚರಿಸಿದರು.