ಪದ್ಮಶ್ರೀ ಪುರಸ್ಕೃತ ಜಿತೇಂದ್ರ ಸಿಂಗ್ ಶಂಟಿ ಆಪ್‌ಗೆ ಸೇರ್ಪಡೆ
ಹೊಸದಿಲ್ಲಿ : ಪದ್ಮಶ್ರೀ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಜಿತೇಂದ್ರ ಸಿಂಗ್ ಶಂಟಿ ಅವರು ಗುರುವಾರ ಇಲ್ಲಿ ಆಪ್‌ಗೆ ಸೇರ್ಪಡೆಗೊಂಡರು. ಈ ವೇಳೆ ಆಪ್‌ನ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಉಪಸ್ಥಿತರಿದ್ದರು.
ಶಹೀದ್ ಭಗತ್‌ಸಿಂಗ್ ಪ್ರತಿಷ್ಠಾನ (ಎಸ್‌ಬಿಎಸ್)ದ ಅಧ್ಯಕ್ಷರಾಗಿರುವ ಶಂಟಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ತನ್ನ ಸೇವೆಗಾಗಿ 2021ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಮಾಜಿ ಬಿಜೆಪಿ ಶಾಸಕ ಶಂಟಿ ಅವರು ಹಿಂದು ಮತ್ತು ಸಿಖ್ ಸಂಪ್ರದಾಯಗಳಿಗೆ ಅನುಗುಣವಾಗಿ ಅನಾಥ ಶವಗಳ ಅಂತ್ಯಸಂಸ್ಕಾರ ಮತ್ತು ಉತ್ತರಕ್ರಿಯೆಗಳನ್ನು ನಡೆಸುವ ಮೂಲಕ ಹೆಸರಾಗಿರುವ ಎನ್‌ಜಿಒ ಶಹೀದ್ ಭಗತ್ ಸಿಂಗ್ ಸೇವಾದಳದ ಸ್ಥಾಪಕರೂ ಆಗಿದ್ದಾರೆ.
2013ರಿಂದ 2015ರವರೆಗೆ ದಿಲ್ಲಿಯ ಶಹದಾರಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಶಂಟಿ ಮುಂದಿನ ವರ್ಷ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಆಪ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಶಂಟಿ 2012ರಲ್ಲಿ ದಿಲ್ಲಿ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿಯೂ ಆಯ್ಕೆಯಾಗಿದ್ದರು.