×
Ad

ಚುನಾವಣಾ ಪ್ರಚಾರಕ್ಕಾಗಿ ತರಕಾರಿ ಮಾರಾಟಕ್ಕಿಳಿದ ಪದ್ಮಶ್ರೀ ಪುರಸ್ಕೃತ ಅಭ್ಯರ್ಥಿ!

Update: 2024-04-12 15:19 IST

Screengrab:X/@ANI

ತಿರುಚಿರಾಪಳ್ಳಿ (ತಮಿಳುನಾಡು): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರಿ ಸದ್ದುಗದ್ದಲದ ಪ್ರಚಾರ ನಡೆಸುತ್ತಿರುವ ಪ್ರಮುಖ ರಾಜಕೀಯ ನಾಯಕರ ನಡುವೆ, ತಿರುಚಿರಾಪಳ್ಳಿ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೊಬ್ಬರು ಹೂಮಾಲೆಯನ್ನು ಮಾಡುತ್ತಾ, ತರಕಾರಿ ಮಾರಾಟ ಮಾಡುತ್ತಾ ತರಕಾರಿ ವರ್ತಕರೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ತಿರುಚಿರಾಪಳ್ಳಿ ನಿವಾಸಿಯಾದ 62 ವರ್ಷದ ಎಸ್. ದಾಮೋದರನ್ ಅವರು ಗ್ಯಾಸ್ ಒಲೆಯ ಚಿಹ್ನೆಯಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಗರದ ಗಾಂಧಿ ಮಾರುಕಟ್ಟೆಯಲ್ಲಿ ಜನರು ಹಾಗೂ ತರಕಾರಿ ವರ್ತಕರ ಬಳಿ ಮತ ಯಾಚಿಸುತ್ತಿರುವುದು ಕಂಡು ಬಂದಿತು.

ತಮ್ಮ ವೃತ್ತಿ ಜೀವನದ ಕುರಿತು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ದಾಮೋದರನ್, “ನಾನು ತಿರುಚಿರಾಪಳ್ಳಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದೇನೆ. ನಾನು ಈ ಮಣ್ಣಿನ ಮಗ. ನಾನು ತಿರುಚಿರಾಪಳ್ಳಿ ನಗರಕ್ಕೆ ಸೇರಿದ್ದೇನೆ. ನಾನು ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಶುಚಿತ್ವ ಕೇಂದ್ರದಲ್ಲಿ ಸಹ ಸೇವಾ ಸ್ವಯಂಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಈ ಕೆಲಸವನ್ನು ನನ್ನ 21ನೇ ವಯಸ್ಸಿನಲ್ಲಿ ಪ್ರಾರಂಭಿಸಿದೆ. ನನ್ನ 60ನೇ ವಯಸ್ಸಿನಲ್ಲಿ ನಾನು ಶುಚಿತ್ವ ವಲಯದಲ್ಲಿ ಮಾಡಿರುವ ಕೆಲಸಕ್ಕಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದೇನೆ” ಎಂದು ಹೇಳಿದ್ದಾರೆ.

ತಮ್ಮ ವಿಶಿಷ್ಟ ಶೈಲಿಯ ಪ್ರಚಾರದ ಕುರಿತು ಮಾತನಾಡಿರುವ ದಾಮೋದರನ್, “ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಾಂಧಿ ಮಾರುಕಟ್ಟೆಯಿಂದ ನನ್ನ ಪ್ರಚಾರವನ್ನು ಪ್ರಾರಂಭಿಸಿದ್ದೇನೆ. ನಾನು ಎಲ್ಲಿಗೇ ಹೋದರೂ ನನಗೆ ಅದ್ಭುತ ಸ್ವಾಗತ ದೊರೆಯುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ತಾನೇನು ಮಾಡಬೇಕೆಂದಿದ್ದೇನೆ ಎಂಬುದರ ಕುರಿತು ಮಾತನಾಡಿರುವ ದಾಮೋದರನ್, “ನಾವು ತಿರುಚಿರಾಪಳ್ಳಿಯನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿಸಬೇಕಿದೆ. ತಿರುಚಿರಾಪಳ್ಳಿ ಕೇಂದ್ರ ಭಾಗದಲ್ಲಿರುವುದರಿಂದ ಹಲವಾರು ಬಸ್ ಗಳು ಮತ್ತು ಸಾರಿಗೆ ವಾಹನಗಳು ಈ ನಗರವನ್ನು ಹಾದು ಹೋಗುತ್ತಿದ್ದು, ಇಲ್ಲಿ ವರ್ತುಲ ರಸ್ತೆಯನ್ನು ನಿರ್ಮಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ತಿರುಚಿರಾಪಳ್ಳಿ ನಗರದ ಪ್ರಮುಖ ಸ್ಥಳಗಳಲ್ಲಿ ನಾವು ಮೇಲ್ಸೇತುವೆಗಳನ್ನೂ ನಿರ್ಮಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ದೇಶದ ನಾಲ್ಕನೆಯ ಅತ್ಯುನ್ನತ ಪದ್ಮ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರವು ಎಸ್.ದಾಮೋದರನ್ ಅವರಿಗೆ ನೀಡಿ ಗೌರವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News